ಚೆನ್ನೈ : ಇಲ್ಲಿನ ಐತಿಹಾಸಿಕ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ವೇಳೆ ಉಂಟಾದ ಗೊಂದಲವೊಂದು ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪಂದ್ಯಗಳಲ್ಲಿ ‘ವಿಸಿಲ್ ಪೋಡು’ ಎಂದು ಸಂಭ್ರಮಿಸುವ ಅಭಿಮಾನಿಗಳಿಗೆ, ಈ ಬಾರಿ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲೇ ತಡೆವೊಡ್ಡಲಾಯಿತು. ಕೈಯಲ್ಲಿ ವಿಸಿಲ್ ಹಿಡಿದು ಬಂದಿದ್ದ ಪ್ರೇಕ್ಷಕರನ್ನು ಪೊಲೀಸರು ತಡೆದಿದ್ದು ಮಾತ್ರವಲ್ಲದೆ, ಕ್ರೀಡಾಂಗಣದ ಸುತ್ತಮುತ್ತ ವಿಸಿಲ್ ಮಾರಾಟ ಮಾಡದಂತೆ ವ್ಯಾಪಾರಿಗಳಿಗೂ ಸೂಚನೆ ನೀಡಿದ್ದು ಚರ್ಚೆಗೆ ಗ್ರಾಸವಾಯಿತು.
ಕ್ರಿಕೆಟ್ ಮೈದಾನಗಳಲ್ಲಿ ಸಾಮಾನ್ಯವಾಗಿ ಹೊರಗಿನ ಆಹಾರ, ನೀರಿನ ಬಾಟಲಿಗಳು, ಪಟಾಕಿ ಅಥವಾ ದೊಡ್ಡ ಬ್ಯಾಗ್‌ಗಳಿಗೆ ನಿಷೇಧವಿರುತ್ತದೆ. ಆದರೆ, ವಿಸಿಲ್ ತರುವುದನ್ನು ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಸೇರಿಸುವುದು ತೀರಾ ಅಪರೂಪ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆಯೇ, ತ್ರಿಪ್ಲಿಕೇನ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ಪ್ರತಿಕ್ರಿಯೆ ನೀಡಿ ಸ್ಪಷ್ಟನೆ ನೀಡಿದ್ದಾರೆ. ಇಲಾಖೆಯ ಕಡೆಯಿಂದ ಯಾವುದೇ ಅಧಿಕೃತ ನಿಷೇಧ ಹೇರಲಾಗಿಲ್ಲ ಎಂದ ಅವರು, ಭದ್ರತಾ ಕರ್ತವ್ಯದಲ್ಲಿದ್ದ ಕೆಳಹಂತದ ಸಿಬ್ಬಂದಿಯ ನಡುವಿನ ಸಂವಹನ ಕೊರತೆ ಮತ್ತು ಗೊಂದಲದಿಂದಾಗಿ ಈ ರೀತಿ ಆಗಿರಬಹುದು ಎಂದು ತಿಳಿಸಿದ್ದಾರೆ.
ವಿಸಿಲ್ ಮತ್ತು ತಮಿಳುನಾಡು ರಾಜಕೀಯದ ನಂಟು
ಮೇಲ್ನೋಟಕ್ಕೆ ಇದೊಂದು ಭದ್ರತಾ ಲೋಪದಂತೆ ಕಂಡರೂ, ಇದರ ಹಿಂದೆ ಪ್ರಬಲ ರಾಜಕೀಯ ಕಾರಣವಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ತಮಿಳುನಾಡು ಸದ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿದೆ. ಜನವರಿ ತಿಂಗಳಲ್ಲಷ್ಟೇ ಭಾರತೀಯ ಚುನಾವಣಾ ಆಯೋಗವು ಜನಪ್ರಿಯ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ‘ವಿಸಿಲ್’ ಅನ್ನು ಅಧಿಕೃತ ಚಿಹ್ನೆಯಾಗಿ ನೀಡಿದೆ. ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ವಿಜಯ್ ಅವರ ಪಕ್ಷವು ಸೆಣಸಾಡಲು ಸಜ್ಜಾಗಿದ್ದು, ರಾಜ್ಯಾದ್ಯಂತ ತಮ್ಮ ಕಾರ್ಯಕರ್ತರು ವಿಸಿಲ್ ಚಿಹ್ನೆಯೊಂದಿಗೆ ಪ್ರಚಾರ ಆರಂಭಿಸಿದ್ದಾರೆ.
ಚೆನ್ನೈನ ಕ್ರಿಕೆಟ್ ಸಂಸ್ಕೃತಿಯಲ್ಲಿ ವಿಸಿಲ್ ಅವಿಭಾಜ್ಯ ಅಂಗವಾಗಿದ್ದರೂ, ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಮತ್ತು ರಾಜಕೀಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಈ ಕ್ರಮ ಕೈಗೊಂಡಿರಬಹುದು ಎನ್ನಲಾಗಿದೆ. ವಿಜಯ್ ಅವರ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾದಲ್ಲಿನ “ವಿಸಿಲ್ ಪೋಡು” ಹಾಡು ಮತ್ತು ‘ಬಿಗಿಲ್’ (ತಮಿಳಿನಲ್ಲಿ ವಿಸಿಲ್) ಸಿನಿಮಾದ ರೆಫರೆನ್ಸ್‌ಗಳು ಅವರ ಅಭಿಮಾನಿ ಬಳಗದಲ್ಲಿ ವಿಸಿಲ್ ಅನ್ನು ಒಂದು ಭಾವನಾತ್ಮಕ ಸಂಕೇತವನ್ನಾಗಿ ಮಾಡಿದೆ. ಹೀಗಾಗಿ ಕ್ರೀಡಾಂಗಣದಲ್ಲಿ ವಿಸಿಲ್ ಮೊಳಗುವುದು ಪರೋಕ್ಷವಾಗಿ ರಾಜಕೀಯ ಪಕ್ಷವೊಂದರ ಪ್ರಚಾರವಾಗಬಹುದು ಎಂಬ ಆತಂಕ ಅಧಿಕಾರಿಗಳಲ್ಲಿ ಮೂಡಿರುವ ಸಾಧ್ಯತೆಯಿದೆ.
ನ್ಯೂಜಿಲೆಂಡ್‌ಗೆ ಸುಲಭ ಜಯ
ಮೈದಾನದ ಹೊರಗಿನ ಗೊಂದಲಗಳ ನಡುವೆಯೂ ಮೈದಾನದೊಳಗೆ ನ್ಯೂಜಿಲೆಂಡ್ ತಂಡವು ಉತ್ತಮ ಪ್ರದರ್ಶನ ನೀಡಿತು. ಅಫ್ಘಾನಿಸ್ತಾನ ನೀಡಿದ್ದ 182 ರನ್‌ಗಳ ಸವಾಲನ್ನು ಬೆನ್ನತ್ತಿದ ಕಿವೀಸ್ ಪಡೆ, ಐದು ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಿತು. ಆರಂಭಿಕ ಆಘಾತದ ನಡುವೆಯೂ ಟಿಮ್ ಸೈಫರ್ಟ್ ಅವರ ಸ್ಫೋಟಕ ಬ್ಯಾಟಿಂಗ್ (42 ಎಸೆತಗಳಲ್ಲಿ 65 ರನ್) ತಂಡಕ್ಕೆ ನೆರವಾಯಿತು. ಅಫ್ಘಾನಿಸ್ತಾನ ಪರ ಗುಲ್ಬದಿನ್ ನೈಬ್ 63 ರನ್ ಗಳಿಸಿ ಹೋರಾಟದ ಮೊತ್ತ ಕಲೆಹಾಕಲು ನೆರವಾದರಾದರೂ, ಬೌಲಿಂಗ್‌ನಲ್ಲಿ ಆದ ತಪ್ಪುಗಳು ಮತ್ತು ಕ್ಯಾಚ್ ಕೈಚೆಲ್ಲಿದ್ದರ ಪರಿಣಾಮವಾಗಿ ಅವರು ಸೋಲು ಕಾಣಬೇಕಾಯಿತು. ಅಂತಿಮವಾಗಿ ಮಿಚೆಲ್ ಸ್ಯಾಂಟ್ನರ್ ಮತ್ತು ಡ್ಯಾರಿಲ್ ಮಿಚೆಲ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಇದನ್ನೂ ಓದಿ : ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿ | ಕುಸಿದು ಬಿದ್ದು ಮಹಿಳೆ ಸಾವು!



















