ಬೆಂಗಳೂರು : ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಕಿರಣ್ (26) ಎಂದು ಗುರುತಿಸಲಾಗಿದ್ದು, ವೃತ್ತಿಯಿಂದ ಜಿಮ್ ಟ್ರೈನರ್ ಹಾಗೂ ಬಾಡಿ ಬಿಲ್ಡರ್ ಆಗಿದ್ದನು. ಕಳೆದ ಮೂರು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಕಿರಣ್, ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ನೀಡಲು ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಆದರೆ ಪ್ರೀತಿಸಿದ ಯುವತಿ ಇಂದು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿಸಿ, ಮದುವೆಯ ಆಮಂತ್ರಣ ಪತ್ರಿಕೆ ಹಾಗೂ ಹೊಸ ಸೀರೆಯನ್ನು ತೋರಿಸಿದ್ದಾಳೆ. ಇದರಿಂದ ತೀವ್ರ ಮನನೊಂದ ಕಿರಣ್ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ರೂಮ್‌ನ್ನು ಒಳಗಿನಿಂದ ಲಾಕ್ ಮಾಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯವರು ಬಾಗಿಲು ತೆರೆಯುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಮಹಾಲಕ್ಷ್ಮಿಪುರಂ ಲೇಔಟ್ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಮಹಾಲಕ್ಷ್ಮಿಪುರಂ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಹಂಪಿಗೆ ಬಂದ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ



















