ಬೆಂಗಳೂರು | ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ಸಂಸದ ತೇಜಸ್ವಿ ಸೂರ್ಯ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಸೋಮವಾರದಿಂದ ಜಾರಿಯಾಗಬೇಕಿದ್ದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಹೌದು.. ಮುಂದಿನ ಸೋಮವಾರದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ರಾಜ್ಯ ಸರ್ಕಾರ ಮೆಟ್ರೋ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದ್ದವು. ಈ ನಿರ್ಧಾರದ ವಿರುದ್ಧ ಕಳೆದ ಒಂದು ವಾರದಿಂದ ಹೋರಾಟ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ, ದರ ಏರಿಕೆಯನ್ನು ತಡೆಹಿಡಿಯುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.
ನಿನ್ನೆ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು. ಇಂದು ತಕ್ಷಣದ ಹಸ್ತಕ್ಷೇಪವನ್ನು ಕೋರಿ ಕೇಂದ್ರ ಗೃಹ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಮೆಟ್ರೋ ದರ ಏರಿಕೆ ಬಗ್ಗೆ ಮನೋಹರ್ ಲಾಲ್ ಖಟ್ಟರ್ ಜತೆ ದೂರವಾಣಿ ಸಂಭಾಷಣೆ ಮಾಡಿರುವೆ. ಫೆ.9ರಿಂದ ಮೆಟ್ರೋ ಟಿಕೆಟ್ ದರ ಹೆಚ್ಚಿಸದಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ದೇಶದಲ್ಲೇ ನಮ್ಮ ಮೆಟ್ರೋ ಅತ್ಯಂತ ದುಬಾರಿ ಮೆಟ್ರೋ ಸೇವೆಯಾಗಿದೆ. ಮೆಟ್ರೋ ಪ್ರಯಾಣ ದರ ವ್ಯತ್ಯಾಸದ ಬಗ್ಗೆ ಕೇಂದ್ರದ ಗಮನ ಸೆಳೆದಿದ್ದೇನೆ. ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಲಕ್ಷಾಂತರ ಜನರಿಗೆ ಹೊರೆಯಾಗಲಿದೆ. ಸಾರ್ವಜನಿಕ ಸಾರಿಗೆ ತಲುಪಲು ಕಷ್ಟವಾಗುತ್ತದೆ. ಹೀಗಾಗಿ ಪ್ರಸ್ತಾವಿತ ದರ ಏರಿಕೆ ತಾತ್ಕಾಲಿಕವಾಗಿ ತಡೆ ಹಿಡಿಯಲು ಸೂಚಿಸಿದ್ದು, ಸೋಮವಾರದಿಂದ ಮೆಟ್ರೋ ಟೆಕೆಟ್ ದರ ಹೆಚ್ಚಳವಾಗಲ್ಲ. ಪ್ರಯಾಣಿಕರ ಅನುಕೂಲಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ ಪ್ರೇಮ್!



















