ಬೆಂಗಳೂರು: ಜಲಮಂಡಳಿ ನಿರ್ಲಕ್ಷ್ಯ ಬೆನ್ನಲ್ಲೇ ಜಿಬಿಎ ನಿರ್ಲಕ್ಷ್ಯದ ಪರಿಣಾಮವಾಗಿ ಸರ್ವಜ್ಞ ನಗರದ ಗೋವಿಂದಪುರದಲ್ಲಿ ಸ್ಕೂಲ್ ಎದುರು ನಡೆಯುತ್ತಿದ್ದ ಜಿಬಿಎ ಕಾಮಗಾರಿಯ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದ ಕಾರಣ, ಓಪನ್ ಆಗಿದ್ದ ಚರಂಡಿಗೆ ಒಂದನೇ ತರಗತಿ ವಿದ್ಯಾರ್ಥಿ ಬಿದ್ದಿರುವ ಘಟನೆ ನಡೆದಿದೆ.
ಸ್ಥಳೀಯರ ಆರೋಪದಂತೆ, ಕಾಮಗಾರಿ ನಡೆಯುತ್ತಿದ್ದರೂ ಯಾವುದೇ ಸುರಕ್ಷತಾ ವ್ಯವಸ್ಥೆ, ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿರಲಿಲ್ಲ. ಇದರ ಪರಿಣಾಮ ಸ್ಕೂಲ್‌ಗೆ ಹೋಗುವ ವೇಳೆ ಸೈಡ್‌ನಲ್ಲೇ ನಡೆದುಕೊಂಡು ಹೋಗುತ್ತಿದ್ದ ಬಾಲಕ, ಸ್ಲ್ಯಾಬ್ ಓಪನ್ ಇದ್ದ ಹಿನ್ನಲೆಯಲ್ಲಿ ಎದುರುಗಡೆ ಇದ್ದ ಚರಂಡಿಗೆ ಬಿದ್ದಿದ್ದಾನೆ.
ಅದೃಷ್ಟವಶಾತ್, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ದೊಡ್ಡ ದುರಂತ ತಪ್ಪಿದೆ. ಆದರೆ ಚರಂಡಿಯೊಳಗೆ ಕಬ್ಬಿಣದ ರಾಡ್‌ಗಳು ಇದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಗೆ ಜಲಮಂಡಳಿ ಹಾಗೂ ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಕಾಮಗಾರಿಯನ್ನು ಸುರಕ್ಷಿತವಾಗಿ ನಡೆಸಬೇಕು ಹಾಗೂ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕೋಲಾರ | ಹೆಲಿಕಾಪ್ಟರ್‌ನಲ್ಲಿ ಬಂದ ಸಚಿವ ಭೈರತಿ ಸುರೇಶ್ ನೋಡಲು ಮುಗಿಬಿದ್ದ ಜನ



















