ನ್ಯೂಯಾರ್ಕ್ : ಸೌಂದರ್ಯ ಪ್ರಜ್ಞೆ ಮತ್ತು ದೈಹಿಕ ಆಕರ್ಷಣೆಗಾಗಿ ಮನುಷ್ಯ ಎಂತಹ ಸಾಹಸಕ್ಕೂ ಸಿದ್ಧ ಎನ್ನುವುದಕ್ಕೆ ಅಮೆರಿಕದಲ್ಲಿ ಸದ್ಯ ಚಾಲ್ತಿಗೆ ಬಂದಿರುವ ವಿಲಕ್ಷಣ ಸೌಂದರ್ಯವರ್ಧಕ ಪ್ರಕ್ರಿಯೆಯೇ ಸಾಕ್ಷಿ. ತಮ್ಮ ದೇಹದ ಆಕಾರವನ್ನು ತಿದ್ದಿಕೊಳ್ಳಲು ಅಮೆರಿಕದ ಮಹಿಳೆಯರು ಈಗ ಮೃತದೇಹಗಳಿಂದ (ಶವಗಳಿಂದ) ಪಡೆದ ಕೊಬ್ಬನ್ನು ತಮ್ಮ ದೇಹಕ್ಕೆ ಚುಚ್ಚಿಸಿಕೊಳ್ಳುತ್ತಿದ್ದಾರೆ. ‘ಅಲೊಕ್ಲೇ’ (AlloClae) ಎಂಬ ಹೆಸರಿನ ಈ ಪ್ರಕ್ರಿಯೆಯು ವೈದ್ಯಕೀಯ ಜಗತ್ತಿನಲ್ಲಿ ದೊಡ್ಡ ಮಟ್ಟದ ನೈತಿಕ ಚರ್ಚೆಯನ್ನು ಹುಟ್ಟುಹಾಕಿದೆ.
ಏನಿದು ಪ್ರಕ್ರಿಯೆ?
ವಿಜ್ಞಾನ ಮತ್ತು ಸಂಶೋಧನೆಗಾಗಿ ದಾನ ಮಾಡಲಾದ ಮೃತದೇಹಗಳಿಂದ ಮೊದಲು ಕೊಬ್ಬನ್ನು ಹೊರತೆಗೆಯಲಾಗುತ್ತದೆ. ನಂತರ ಈ ಕೊಬ್ಬನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ, ಅದರಲ್ಲಿರುವ ಡಿಎನ್‌ಎ ಮತ್ತು ಜೀವಂತ ಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಹೀಗೆ ಸಂಸ್ಕರಿಸಿದ ಕೊಬ್ಬನ್ನು ಸ್ತನಗಳು, ಸೊಂಟ ಮತ್ತು ಪೃಷ್ಠದ ಭಾಗಗಳಿಗೆ ಚುಚ್ಚುಮದ್ದು (Filler) ರೂಪದಲ್ಲಿ ನೀಡಲಾಗುತ್ತದೆ. ಈ ಪ್ರಕ್ರಿಯೆಯು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ಭಿನ್ನವಾಗಿದ್ದು, ಯಾವುದೇ ಅರಿವಳಿಕೆ (Anesthesia) ನೀಡದೆ ಕೇವಲ ಒಂದು ಗಂಟೆಯೊಳಗೆ ಮುಗಿಯುತ್ತದೆ ಎಂಬುದು ಇದರ ವಿಶೇಷ.
ಕೋಟ್ಯಂತರ ರೂಪಾಯಿ ವೆಚ್ಚ
ಈ ವಿಧಾನವು ಅತಿ ಹೆಚ್ಚು ದುಬಾರಿಯಾಗಿದ್ದು, ಇದರ ವೆಚ್ಚ ಸುಮಾರು 10,000 ಡಾಲರ್‌ನಿಂದ 1,00,000 ಡಾಲರ್‌ವರೆಗೆ (ಅಂದರೆ, ಸುಮಾರು 8 ಲಕ್ಷದಿಂದ 83 ಲಕ್ಷ ರೂ.ವರೆಗೆ) ಇರುತ್ತದೆ. ಇತ್ತೀಚೆಗೆ ಮ್ಯಾನ್‌ಹ್ಯಾಟನ್‌ನ 34 ವರ್ಷದ ಮಹಿಳೆಯೊಬ್ಬರು ತಮ್ಮ ದೇಹದ ಆಕಾರವನ್ನು ಸರಿಪಡಿಸಿಕೊಳ್ಳಲು ಬರೋಬ್ಬರಿ 40 ಲಕ್ಷ ರೂಪಾಯಿ ವೆಚ್ಚ ಮಾಡಿ ಈ ಚಿಕಿತ್ಸೆ ಪಡೆದುಕೊಂಡಿದ್ದಾರೆ. “ಇದೊಂದು ರೀತಿಯ ಮರುಬಳಕೆ ವಿಧಾನ. ಹಾಗಾಗಿ, ಇದರಲ್ಲಿ ಯಾವುದೇ ಅನೈತಿಕತೆ ಇಲ್ಲ” ಎಂಬುದು ಈ ಚಿಕಿತ್ಸೆ ಪಡೆಯುತ್ತಿರುವವರ ವಾದವಾಗಿದೆ. ಓಜೆಂಪಿಕ್‌ನಂತಹ ತೂಕ ಇಳಿಸುವ ಮದ್ದು ಬಳಸಿದವರು ತಮ್ಮ ದೇಹದ ಕಳೆದುಹೋದ ಅಂದವನ್ನು ಮರಳಿ ಪಡೆಯಲು ಈ ವಿಧಾನವನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ.
ನೈತಿಕ ಸಂಘರ್ಷದ ವಾದ-ಪ್ರತಿವಾದ
ಈ ಹೊಸ ಟ್ರೆಂಡ್ ಹಲವು ವೈದ್ಯಕೀಯ ಅಪಾಯಗಳನ್ನೂ ತಂದೊಡ್ಡಿದೆ. ಕೊಬ್ಬನ್ನು ಚುಚ್ಚಿಸಿಕೊಳ್ಳುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಅಲ್ಲದೆ, ರಕ್ತನಾಳಗಳಿಗೆ ತಪ್ಪಾಗಿ ಚುಚ್ಚುಮದ್ದು ನೀಡಿದರೆ ಪ್ರಾಣಾಪಾಯವೂ ಸಂಭವಿಸಬಹುದು. ಮುಖ್ಯವಾಗಿ, ಸ್ತನ ಭಾಗದಲ್ಲಿ ಈ ರೀತಿ ಹೊರಗಿನ ಕೊಬ್ಬನ್ನು ತುಂಬಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಕ್ಯಾನ್ಸರ್ ತಪಾಸಣೆ ಅಥವಾ ಮ್ಯಾಮೊಗ್ರಾಮ್ ಮಾಡುವಾಗ ವರದಿಗಳು ತಪ್ಪಾಗಿ ಬರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಅಲ್ಲದೆ, ನೈತಿಕವಾಗಿ ನೋಡಿದರೆ, ದೇಹ ದಾನ ಮಾಡಿದವರ ಉದ್ದೇಶ ವೈದ್ಯಕೀಯ ಸಂಶೋಧನೆ ಅಥವಾ ಜೀವ ಉಳಿಸುವುದಾಗಿರುತ್ತದೆಯೇ ಹೊರತು, ಯಾರೋ ಒಬ್ಬರ ಸೌಂದರ್ಯ ಹೆಚ್ಚಿಸುವುದಕ್ಕಾಗಿ ಅಲ್ಲ ಎಂಬ ವಾದಗಳು ಕೇಳಿಬರುತ್ತಿವೆ. ಮನುಷ್ಯನ ಶವವನ್ನು ಸೌಂದರ್ಯವರ್ಧಕ ವಸ್ತುವಾಗಿ ಬಳಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ : ಕೇರಳದಿಂದ ಹಂಪಿಗೆ ಬಂದಿದ್ದ ಟೂರಿಸ್ಟ್ ಬಸ್ ಪಲ್ಟಿ.. 3 ವಿದ್ಯಾರ್ಥಿಗಳು, ಓರ್ವ ಶಿಕ್ಷಕಿಗೆ ಗಾಯ!



















