ಬೆಂಗಳೂರು: ಬೆಂಗಳೂರಿನ ವಾಯು ಗುಣಮಟ್ಟ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಆತಂಕಕಾರಿ ಮಟ್ಟದಲ್ಲಿ ಉಳಿದಿದೆ. ಇದರೊಂದಿಗೆ ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ವಾಯು ಗುಣಮಟ್ಟ 200ರ ಹತ್ತಿರಕ್ಕೆ ತಲುಪಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟುಮಾಡಿದೆ. ಈ ಸ್ಥಿತಿ ಮುಂದುವರೆದರೆ ದೆಹಲಿಯಂತೆಯೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೆಲ ದಿನಗಳಿಂದ ಏರಿಕೆ ಕಾಣುತ್ತಿದ್ದ ಬಳ್ಳಾರಿಯ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಇಂದು 196ಕ್ಕೆ ತಲುಪಿದೆ. ಇನ್ನು ಶಿವಮೊಗ್ಗದಲ್ಲಿ AQI 184 ದಾಖಲಾಗಿದ್ದು, ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ. ರಾಜಧಾನಿ ಬೆಂಗಳೂರಿನಲ್ಲೂ ಪರಿಸ್ಥಿತಿ ಉತ್ತಮವಾಗಿಲ್ಲ. ಇಂದು ಬೆಂಗಳೂರಿನ AQI 173ಕ್ಕೆ ತಲುಪಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ತಜ್ಞರ ಪ್ರಕಾರ, ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.
ಸೂಕ್ಷ್ಮ ಕಣಗಳಿಂದ ಜೀವಕ್ಕೆ ಅಪಾಯ
ವಾಯು ಮಾಲಿನ್ಯದ ಪ್ರಮುಖ ಕಾರಣಗಳಾದ PM2.5 ಮತ್ತು PM10 ಕಣಗಳು ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುತ್ತಿವೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84, ಮತ್ತು PM10 ಪ್ರಮಾಣ 109ಕ್ಕೆ ಏರಿಕೆಯಾಗಿದೆ.
PM10 ಕಣಗಳು ಮಾನವನ ಕೂದಲಿಗಿಂತ ಸುಮಾರು 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಕಣಗಳು ಮಾನವನ ಕೂದಲಿನ ಕೇವಲ ಶೇ. 3ರಷ್ಟು ದಪ್ಪವಿರುವ ಅತಿ ಸೂಕ್ಷ್ಮ ಕಣಗಳಾಗಿವೆ. ಇವು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತವನ್ನು ಸೇರುತ್ತವೆ. ಇದರಿಂದ ದೀರ್ಘಾವಧಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಆರೋಗ್ಯ ತಜ್ಞರು ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗೆ ಹೋಗುವಾಗ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮಾಸ್ಕ್ ಬಳಕೆ, ಅನಗತ್ಯ ವಾಹನ ಸಂಚಾರವನ್ನು ಕಡಿಮೆ ಮಾಡುವುದು ಹಾಗೂ ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
- ಬೆಂಗಳೂರು –173
- ಮಂಗಳೂರು-170
- ಮೈಸೂರು –168
- ಬೆಳಗಾವಿ – 144
- ಕಲಬುರ್ಗಿ-134
- ಶಿವಮೊಗ್ಗ – 184
- ಬಳ್ಳಾರಿ – 196
- ಹುಬ್ಬಳ್ಳಿ- 156
- ಉಡುಪಿ –168
- ವಿಜಯಪುರ –160
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
ಇದನ್ನೂ ಓದಿ : 16ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ 63,050 ಕೋಟಿ ರೂ. ತೆರಿಗೆ ಪಾಲು ಘೋಷಣೆ



















