ಬೆಂಗಳೂರು: ಕಾನ್ಸಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ಪಕ್ಷದ ವಿರುದ್ಧ ಹಾಗೂ ಐಟಿ ಅಧಿಕಾರಿಗಳ ಮೇಲೆ ಬೊಟ್ಟು ಮಾಡಿ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಇದೀಗ, ಈ ಕುರಿತು ಸತ್ಯಾಸತ್ಯತೆ ಸಮಗ್ರ ತನಿಖೆಗೆ ಕೋರಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಕಾನ್ಸಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣವು ರಾಜ್ಯದ ಮಟ್ಟದಲ್ಲಿ ಗಂಭೀರ ಪ್ರಕರಣವಾಗಿದ್ದು, ಇಂತಹ ಸಂದರ್ಭದಲ್ಲಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಶನಿವಾರ ಎಲ್ಲಾ ಪ್ರಮುಖ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಯಲ್ಲಿ, “ನನಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮುಂಬರುವ ಚುನಾವಣೆಗೆ ಸಂಬಂಧಿಸಿ ಬಿಜೆಪಿಯವರು ಸಿಜೆ ರಾಯ್ ಅವರ ಬಳಿ ನೂರಾರು ಕೋಟಿ ರೂಪಾಯಿ ಹಣವನ್ನು ಚುನಾವಣಾ ನಿಧಿ ಹೆಸರಿನಲ್ಲಿ ಕೇಳಿದ್ದಾರೆ. ಆ ಹಣ ನೀಡಲು ನಿರಾಕರಿಸಿದ ಕಾರಣದಿಂದಾಗಿ, ಕಳೆದ ಒಂದು ತಿಂಗಳಿನಿಂದ ಇನ್‌ಕಂ ಟ್ಯಾಕ್ಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು, ರಾಯ್ ಅವರನ್ನು ಟಾರ್ಗೆಟ್ ಮಾಡಿ ನಿರಂತರ ಕಿರುಕುಳ ನೀಡಲಾಗಿದೆ” ಎಂದು ಅತ್ಯಂತ ಗಂಭೀರ ಆರೋಪ ಮಾಡಿದ್ದರು.
ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಯ ಆಧಾರದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಮಾಡಲಾಗಿರುವ ಅಕ್ರಮ ಚುನಾವಣಾ ಹಣಕಾಸು ಸಂಬಂಧಿತ ಆರೋಪಗಳು, ಸರ್ಕಾರಿ ತನಿಖಾ ಸಂಸ್ಥೆಗಳ ಉದ್ದೇಶಪೂರ್ವಕ ದುರುಪಯೋಗದ ಆರೋಪಗಳು, ನಿರಂತರ ಮಾನಸಿಕ ಕಿರುಕುಳದ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ಅಂಶಗಳು, ಗಂಭೀರ ಕ್ರಿಮಿನಲ್ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯವಾಗಿರುವ ಹಿನ್ನೆಲೆಯಲ್ಲಿ, ಅವುಗಳ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಶಾಸಕರ ಹೇಳಿಕೆಯನ್ನು ಕೇವಲ ರಾಜಕೀಯ ಅಭಿಪ್ರಾಯವೆಂದು ತಳ್ಳಿಹಾಕಲು ಸಾಧ್ಯವಿಲ್ಲ.ಏಕೆಂದರೆ ಅವರು ನಿಖರವಾಗಿ ಹಣದ ಬೇಡಿಕೆಯ ಸ್ವರೂಪ, ಮೊತ್ತ, ಕಾಲಾವಧಿ ಹಾಗೂ ಸರ್ಕಾರಿ ತನಿಖಾ ಸಂಸ್ಥೆಗಳ ದುರುಪಯೋಗದ ಕುರಿತು ಸ್ಪಷ್ಟ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಅವರ ಹೇಳಿಕೆಗಳು ಸತ್ಯವಾಗಿದ್ದಲ್ಲಿ CJ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ನೇರ ಅಥವಾ ಪರೋಕ್ಷ ಕಾರಣಕಾರಕ ಅಂಶವಾಗುವ ಸಾಧ್ಯತೆ ಇರುವುದರಿಂದ, ಈ ಹೇಳಿಕೆಗಳನ್ನು ದಾಖಲೆಗೊಳಿಸಿ, ಶಾಸಕರನ್ನು ಕಾನೂನುಬದ್ಧವಾಗಿ ವಿಚಾರಣೆ ನಡೆಸಿ, ಸಂಬಂಧಿಸಿದ ಎಲ್ಲ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಒಳ್ಳೆ ಬುದ್ಧಿವಂತ, ಕಷ್ಟ ಅಂದವರಿಗೆ ಬೇಗ ಸ್ಪಂದಿಸುವ ವ್ಯಕ್ತಿ ರಾಯ್ | ವೈ.ಎ ನಾರಾಯಣ ಸ್ವಾಮಿ ಸಂತಾಪ


















