ನವದೆಹಲಿ : ರಕ್ಷಣಾ ಇಲಾಖೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ಈ ಬಾರಿ ಬಜೆಟ್ನಲ್ಲಿ 7.8 ಲಕ್ಷ ಕೋಟಿ ರೂಪಾಯಿ ನೀಡಿದ್ದು, ಬಂಡವಾಳ ವೆಚ್ಚದ ಅಡಿಯಲ್ಲಿ ರಕ್ಷಣಾ ಪಡೆಗಳು ಆಧುನೀಕರಣಕ್ಕಾಗಿ 2.19 ಲಕ್ಷ ಕೋಟಿ ರೂ.ಗಳನ್ನು ಪಡೆಯಲಿವೆ.
ಒಟ್ಟಾರೆ ಬಜೆಟ್ನಲ್ಲಿ ಈ ಬಾರಿ ರಕ್ಷಣಾ ಇಲಾಖೆಗೆ ಹಂಚಿಕೆಯಲ್ಲಿ ಶೇ. 15ರಷ್ಟು ಏರಿಕೆ ಮಾಡಲಾಗಿದೆ. 2026-27ರಲ್ಲಿ ಬಂಡವಾಳ ವೆಚ್ಚದಲ್ಲಿ ಶೇ 21.84 ರಷ್ಟು ಹೆಚ್ಚಳವಾಗಿದ್ದು, 2025ರ ಆರ್ಥಿಕ ವರ್ಷದಲ್ಲಿ ನೀಡಲಾಗಿದ್ದ 1.80 ಲಕ್ಷ ಕೋಟಿ ರೂ.ಗಳಿಂದ 2.19 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ರಕ್ಷಣಾ ಇಲಾಖೆಯು ರಫೇಲ್ ಯುದ್ಧ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳ ಒಪ್ಪಂದಗಳಂತಹ ಪ್ರಮುಖ ಯೋಜನೆಗಳನ್ನು ಹೊಂದಿದೆ. ನಾಗರಿಕ ರಕ್ಷಣಾ ಬಜೆಟ್ನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 0.45ರಷ್ಟು ಕಡಿಮೆ ಮಾಡಲಾಗಿದೆ. ಈ ನಡುವೆ ಆದಾಯ ರಕ್ಷಣಾ ಸೇವೆ ಮತ್ತು ಬಂಡವಾಳ ಹೂಡಿಕೆಗೆ ಕ್ರಮವಾಗಿ 3,65,478.98 ಕೋಟಿ ರೂ. ಮತ್ತು 2,19,306.47 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಇದು ಶೇ. 17.24 ಮತ್ತು ಶೇ. 21.84 ರಷ್ಟು ಏರಿಕೆಯಾಗಿದೆ. ರಕ್ಷಣಾ ಪಿಂಚಣಿ ಹಂಚಿಕೆಯಲ್ಲೂ ಏರಿಕೆ ಕಂಡಿದ್ದು, ₹ 1,71,338.22 ಕೋಟಿ ಹೆಚ್ಚಳವಾಗಿದೆ.
ರಕ್ಷಣಾ ವಲಯದ ಉತ್ತೇಜನಕ್ಕಾಗಿ, ರಕ್ಷಣಾ ವಲಯದ ಘಟಕಗಳ ನಿರ್ವಹಣೆ, ದುರಸ್ತಿ ಅಥವಾ ಒಟ್ಟಾರೆ ಅವಶ್ಯಕತೆಗಳಿಗಾಗಿ ಬಳಸಲಾಗುವ ವಿಮಾನದ ಭಾಗಗಳ ತಯಾರಿಕೆಗೆ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಅಮೆರಿಕ ಸುಂಕ ಹೆಚ್ಚಳದ ಹಿನ್ನೆಲೆ ವಿತ್ತ ಸಚಿವರು, ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಎಲ್ಲಾ ಸುಂಕ ವಿಧಿಸಬಹುದಾದ ಸರಕುಗಳ ಮೇಲಿನ ಸುಂಕ ದರವನ್ನು ಶೇಕಡಾ 20 ರಿಂದ 10ಕ್ಕೆ ಇಳಿಸುವ ಪ್ರಸ್ತಾಪವನ್ನು ಮಂಡಿಸಿದರು.
ಅಮೆರಿಕ ಸುಂಕದ ಹೊಡೆತದಿಂದಾಗಿ ಸಾಗರ ಆಹಾರ ಉದ್ಯಮವನ್ನು ಮೇಲೆತ್ತುವ ಮತ್ತು ರಫ್ತನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಈ ಹಿನ್ನೆಲೆ ಸಮುದ್ರ ಆಹಾರವನ್ನು ಸಂಸ್ಕರಿಸಲು ಬಳಸುವ ಸುಂಕ ರಹಿತ ಆಮದು ಮಿತಿಯನ್ನು ಶೇ. 3ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಹಾಗೇ ಚರ್ಮ ಅಥವಾ ಸಂಶ್ಲೇಷಿತ ಪಾದರಕ್ಷೆಗಳ ರಫ್ತಿಗೆ ಪ್ರಸ್ತುತ ಲಭ್ಯವಿರುವ ನಿರ್ದಿಷ್ಟ ಒಳಹರಿವಿನ ಸುಂಕ ರಹಿತ ಆಮದಿಗೆ ಅವಕಾಶ ನೀಡಲಾಗಿದೆ. ಬ್ಯಾಟರಿಗಳು ಮತ್ತು ನಿರ್ಣಾಯಕ ಖನಿಜಗಳಿಗೆ ಲಿಥಿಯಂ ಐಯಾನ್ ಸೆಲ್ಸ್ ತಯಾರಿಸಲು ಬಳಸುವ ಬಂಡವಾಳ ಸರಕುಗಳಿಗೆ ಮೂಲ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಲಾಗಿದೆ. ಇದರಿಂದ ಸಮುದ್ರ ಆಹಾರ, ಚರ್ಮ ಮತ್ತು ಪಾದರಕ್ಷೆ ಹಾಗೂ ಬ್ಯಾಟರಿ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಕಾಣಲಿದೆ.
ಇದನ್ನೂ ಓದಿ : ಬೀದರ್ ಅನುಮಾನಾಸ್ಪದ ವಸ್ತು ಸ್ಫೋಟ ಕೇಸ್ – ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಕ್ಕಳ ಆರೋಗ್ಯ ವಿಚಾರಿಸಿದ ಈಶ್ವರ್ ಖಂಡ್ರೆ!



















