ಬೀಜಿಂಗ್: ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬ್ಯಾಟರಿ ಮತ್ತು ಪ್ರೊಸೆಸರ್ ಸಾಮರ್ಥ್ಯದ ವಿಚಾರದಲ್ಲಿ ಹೊಸ ಯುದ್ಧವನ್ನೇ ಸಾರುವಂತೆ ಶಿಯೋಮಿ ಒಡೆತನದ ‘ರೆಡ್ಮಿ’ ತನ್ನ ಬಹುನಿರೀಕ್ಷಿತ ಟರ್ಬೊ ಸರಣಿಯನ್ನು ಅನಾವರಣಗೊಳಿಸಿದೆ. ಚೀನಾದಲ್ಲಿ ಬಿಡುಗಡೆಯಾಗಿರುವ ಈ ಹೊಸ ಸರಣಿಯಲ್ಲಿ ‘ರೆಡ್ಮಿ ಟರ್ಬೊ 5’ ಮತ್ತು ‘ರೆಡ್ಮಿ ಟರ್ಬೊ 5 ಮ್ಯಾಕ್ಸ್’ ಎಂಬ ಎರಡು ಪ್ರಬಲ ಫೋನ್‌ಗಳಿದ್ದು, ಇವು ತಾಂತ್ರಿಕವಾಗಿ ಅತ್ಯಂತ ಬಲಿಷ್ಠವಾಗಿವೆ.
ವಿಶೇಷವಾಗಿ ಟರ್ಬೊ 5 ಮ್ಯಾಕ್ಸ್ ಮಾದರಿಯು ಬರೋಬ್ಬರಿ 9,000mAh ಸಾಮರ್ಥ್ಯದ ದೈತ್ಯ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಟೆಕ್ ಪ್ರಿಯರ ಹುಬ್ಬೇರಿಸಿದೆ. ಇದು ರೆಡ್ಮಿ ಬ್ರ್ಯಾಂಡ್‌ನ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಫೋನ್ ಕೇವಲ ಬ್ಯಾಟರಿಗೆ ಮಾತ್ರ ಸೀಮಿತವಾಗಿಲ್ಲ, ಕಾರ್ಯಕ್ಷಮತೆಯಲ್ಲೂ ರಾಕ್ಷಸನಂತಿದೆ. ಮೀಡಿಯಾ ಟೆಕ್‌ನ ಹೊಚ್ಚ ಹೊಸ ‘ಡೈಮೆನ್ಸಿಟಿ 9500s’ ಚಿಪ್‌ಸೆಟ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಇದರೊಂದಿಗೆ 6.83 ಇಂಚಿನ 1.5K OLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 3500 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡಿರುವುದರಿಂದ ಬಿಸಿಲಿನಲ್ಲಿಯೂ ಅತ್ಯುತ್ತಮ ವೀಕ್ಷಣಾ ಅನುಭವ ಸಿಗಲಿದೆ. ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್‌ನ ಲೈಟ್ ಫ್ಯೂಷನ್ 600 ಸೆನ್ಸಾರ್ ಹಾಗೂ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅಳವಡಿಸಲಾಗಿದೆ. ಸೆಲ್ಫಿಗಾಗಿ 20 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು, ಫೋನ್ ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಅತ್ಯುನ್ನತ IP69K ರೇಟಿಂಗ್ ಹೊಂದಿದೆ. ಅಷ್ಟೇ ಅಲ್ಲದೆ, ಸುರಕ್ಷತೆಗಾಗಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಕೂಡ ನೀಡಲಾಗಿದೆ.
ಫೀಚರ್ಗಳಲ್ಲಿ ಕಡಿಮೆಯಿಲ್ಲ
ಮತ್ತೊಂದೆಡೆ, ಈ ಸರಣಿಯ ಆರಂಭಿಕ ಮಾದರಿಯಾದ ‘ರೆಡ್ಮಿ ಟರ್ಬೊ 5’ ಕೂಡ ವೈಶಿಷ್ಟ್ಯಗಳಲ್ಲಿ ಕಡಿಮೆಯೇನಿಲ್ಲ. ಇದರಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 8500-ಅಲ್ಟ್ರಾ ಚಿಪ್‌ಸೆಟ್ ಬಳಸಲಾಗಿದ್ದು, 7,560mAh ಬ್ಯಾಟರಿಯನ್ನು ಹೊಂದಿದೆ. ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಈ ಬ್ಯಾಟರಿ ಸಾಮರ್ಥ್ಯವೂ ತುಂಬಾ ದೊಡ್ಡದಾಗಿದೆ. ಎರಡೂ ಫೋನ್‌ಗಳು 100W ವೇಗದ ಚಾರ್ಜಿಂಗ್ ಬೆಂಬಲಿಸುವುದರಿಂದ ಬ್ಯಾಟರಿ ದೊಡ್ಡದಾಗಿದ್ದರೂ ಚಾರ್ಜಿಂಗ್ ಸಮಯ ಉಳಿತಾಯವಾಗಲಿದೆ. ಕ್ಯಾಮೆರಾ ವಿಭಾಗದಲ್ಲಿ ಇದು 50 ಮೆಗಾಪಿಕ್ಸೆಲ್ ಸೋನಿ IMX882 ಸೆನ್ಸಾರ್ ಹೊಂದಿದೆ.
ಬೆಲೆಯ ವಿಚಾರಕ್ಕೆ ಬರುವುದಾದರೆ, ಸದ್ಯ ಚೀನಾದಲ್ಲಿ ಬಿಡುಗಡೆಯಾಗಿರುವ ಟರ್ಬೊ 5 ಮ್ಯಾಕ್ಸ್‌ನ ಆರಂಭಿಕ ಬೆಲೆ 2,499 ಯುವಾನ್ ಆಗಿದ್ದು, ಇದು ಭಾರತೀಯ ರೂಪಾಯಿ ಮೌಲ್ಯದಲ್ಲಿ ಅಂದಾಜು 33,000 ರೂ.ಗಳಾಗಬಹುದು. ಹಾಗೆಯೇ ಟರ್ಬೊ 5 ಮಾದರಿಯ ಬೆಲೆ 1,999 ಯುವಾನ್ ಆಗಿದ್ದು, ಇದು ಅಂದಾಜು 26,500 ರೂ.ಗಳ ಆಸುಪಾಸಿನಲ್ಲಿರಲಿದೆ. ರೆಡ್ಮಿಯ ಹಿಂದಿನ ಮಾರುಕಟ್ಟೆ ತಂತ್ರಗಳನ್ನು ಗಮನಿಸಿದರೆ, ಈ ಫೋನ್‌ಗಳು ಜಾಗತಿಕ ಮಾರುಕಟ್ಟೆ ಮತ್ತು ಭಾರತಕ್ಕೆ ‘ಪೋಕೋ’ (Poco) ಬ್ರ್ಯಾಂಡಿಂಗ್ ಅಡಿಯಲ್ಲಿ ಕಾಲಿಡುವ ಸಾಧ್ಯತೆ ದಟ್ಟವಾಗಿದೆ ಎಂದು ತಂತ್ರಜ್ಞಾನ ಪರಿಣಿತರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಬಿಎಂಡಬ್ಲ್ಯು i7 ಹವಾ | 1,000 ಎಲೆಕ್ಟ್ರಿಕ್ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ ಜರ್ಮನ್ ದಿಗ್ಗಜ



















