ಗದಗ : ಐತಿಹಾಸಿಕ ದೇವಾಲಯಗಳ ತವರೂರಾದ ಗದಗದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ದಿನಕ್ಕೊಂದು ಅಚ್ಚರಿಯನ್ನು ಹೊರಹಾಕುತ್ತಿದೆ. ಇಲ್ಲಿನ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನದ 12ನೇ ದಿನವಾದ ಇಂದು (ಗುರುವಾರ) ಅತ್ಯಂತ ಅಪರೂಪದ ಹಾಗೂ ವಿಸ್ಮಯಕಾರಿ 3 ತಲೆಯುಳ್ಳ ನಾಗರ ಹಾವಿನ ಶಿಲ್ಪವೊಂದು ಪತ್ತೆಯಾಗಿದ್ದು, ಇತಿಹಾಸ ತಜ್ಞರ ಹುಬ್ಬೇರಿಸಿದೆ.
ಸಾಮಾನ್ಯವಾಗಿ ದೇವಾಲಯಗಳ ಕೆತ್ತನೆಯಲ್ಲಿ ಒಂದೇ ಹೆಡೆಯ ನಾಗರ ಕಲ್ಲುಗಳು ಕಂಡುಬರುವುದು ಸಹಜ. ಈ ಹಿಂದಿನ ಉತ್ಖನನದಲ್ಲೂ ಅಂತಹ ಶಿಲೆಗಳು ಸಿಕ್ಕಿದ್ದವು. ಆದರೆ, ಇದೇ ಮೊದಲ ಬಾರಿಗೆ ಬರೋಬ್ಬರಿ ಮೂರು ಹೆಡೆಗಳುಳ್ಳ ಸರ್ಪದ ಶಿಲ್ಪವೊಂದು ಪತ್ತೆಯಾಗಿದೆ.
ವಿಶೇಷವೆಂದರೆ, ಹಸಿರು ಬಳಪದ ಕಲ್ಲಿನ ಮೇಲೆ ಅತಿ ಸೂಕ್ಷ್ಮವಾಗಿ ಕೆತ್ತಲಾಗಿರುವ ಈ ಶಿಲ್ಪದಲ್ಲಿ ‘ನಾಗಮಣಿ’ಯನ್ನು ಹೋಲುವ ರಚನೆಯೂ ಕಂಡುಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಶಿಲ್ಪವು ಅಂದಿನ ಕಾಲದ ಶಿಲ್ಪಿಗಳ ನೈಪುಣ್ಯತೆಗೆ ಸಾಕ್ಷಿಯಂತಿದೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ 10×10 ಸ್ಕ್ವೇರ್ ಮೀಟರ್ ಸುತ್ತಳತೆಯಲ್ಲಿ ಒಟ್ಟು ನಾಲ್ಕು ಬ್ಲಾಕ್‌ಗಳಾಗಿ ವಿಂಗಡಿಸಿ ಈ ಉತ್ಖನನ ನಡೆಸಲಾಗುತ್ತಿದೆ. ಸದ್ಯ ನಾಲ್ಕು ಬ್ಲಾಕ್‌ಗಳ ಮಧ್ಯದ ಎರಡು ಗೋಡೆಗಳನ್ನು ತೆರವುಗೊಳಿಸಲಾಗಿದ್ದು, ಗೋಡೆಯಲ್ಲಿದ್ದ ಬೃಹತ್ ಬಂಡೆಗೆ ಕಟ್ಟಿಗೆಯ ಆಧಾರ ನೀಡಲಾಗಿದೆ. ಆಳಕ್ಕೆ ಇಳಿದಂತೆಲ್ಲಾ ಮಣ್ಣಿನ ಪದರಗಳು ಬದಲಾಗುತ್ತಿದ್ದು, ಉತ್ಖನನ ಕಾರ್ಯವನ್ನು ಅತ್ಯಂತ ಸೂಕ್ಷ್ಮವಾಗಿ ನಡೆಸಲಾಗುತ್ತಿದೆ. ಈವರೆಗೆ ಶಿವಲಿಂಗ ಪೀಠ, ನಾಗರ ಕಲ್ಲು, ಪ್ರಾಣಿಗಳ ಮೂಳೆಗಳು ಸೇರಿದಂತೆ 40ಕ್ಕೂ ಹೆಚ್ಚು ಪ್ರಾಚೀನ ಅವಶೇಷಗಳು ಸಿಕ್ಕಿವೆ.
ಇದನ್ನೂ ಓದಿ : 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಟ್ರ್ಯಾಪ್.. ಕೆ.ಪಿ ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್ ಗೋವಿಂದರಾಜು ‘ಲೋಕಾ’ ಬಲೆಗೆ!



















