ಮೈಸೂರು : ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲೇ ಹುಟ್ಟಿ ಬೆಳೆದ 25 ವರ್ಷದ ಯುವರಾಜ ಹೆಸರಿನ ಜಿರಾಫೆ ವಯೋಸಹಜ ಸಮಸ್ಯೆಗಳಿಂದ ಬುಧವಾರ (ಜ.28ರಂದು) ಕೊನೆಯುಸಿರೆಳೆದಿದೆ.
1987ರಲ್ಲಿ ಜರ್ಮನಿಯಿಂದ ತಂದಿದ್ದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 2001ರ ಡಿಸೆಂಬರ್ 7ರಂದು ಈ ಜಿರಾಫೆ ಜನಿಸಿತ್ತು. ಪ್ರಾಣಿಪಾಲಕರ ಆರೈಕೆಯಲ್ಲಿ ಬೆಳೆದ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಹೆಚ್ಚು ವರ್ಷ ಅಂದರೆ 25 ವರ್ಷಗಳ ಕಾಲ ಬದುಕಿತ್ತು.
ಹನಿ-ಹೆನ್ರಿ ಜಿರಾಫೆಗಳಿಗೆ ಜನಿಸಿದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಜಿರಾಫೆಗಳ ಪೈಕಿ ಈವರೆಗೆ ಬದುಕಿದ್ದ ಜಿರಾಫೆ ಯುವರಾಜ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ. 25ನೇ ವರ್ಷ ತುಂಬಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಯುವರಾಜನ ಹುಟ್ಟುಹಬ್ಬವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಅದ್ಧೂರಿಯಾಗಿ ಆಚರಿಸಿದ್ದರು.
ಯುವರಾಜನಿಗೆ ಇಷ್ಟವಾದ ಹುಲ್ಲು, ವಿವಿಧ ಕಾಳುಗಳು ಹಾಗೂ ಹಣ್ಣುಗಳಿಂದ ಸಿಬ್ಬಂದಿ ವಿಶೇಷ ಕೇಕ್ ತಯಾರಿಸಿದ್ದರು. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ.ಅನುಷಾ ಹಾಗೂ ಸಿಬ್ಬಂದಿ ಯುವರಾಜನಿಗೆ ಜನ್ಮದಿನದ ಶುಭ ಕೋರಿ ವಿಶೇಷ ಕೇಕ್ ತಿನ್ನಿಸಿದ್ದರು.
ಇದನ್ನೂ ಓದಿ : ಮಹಾರಾಷ್ಟ್ರದ ‘ದಾದಾ’ಗೆ ಅಂತಿಮ ವಿದಾಯ | ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಜಿತ್ ಪವಾರ್ ಅಂತ್ಯಕ್ರಿಯೆ!



















