ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನಡುವಿನ ಸಂಘರ್ಷ ತಾರಕಕ್ಕೇರಿದೆ. 2026ರ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ತಂಡ ಹಿಂದೆ ಸರಿದ ಬೆನ್ನಲ್ಲೇ, ಇದೀಗ ಆ ದೇಶದ 100ಕ್ಕೂ ಹೆಚ್ಚು ಪತ್ರಕರ್ತರಿಗೆ ಭಾರತಕ್ಕೆ ಬರಲು ವೀಸಾ ಮತ್ತು ಅನುಮತಿ ನಿರಾಕರಿಸುವ ಮೂಲಕ ಐಸಿಸಿ ಕಠಿಣ ಸಂದೇಶ ರವಾನಿಸಿದೆ.
ಫೆಬ್ರವರಿ 7ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ನಡೆಯಲಿರುವ ಟಿ20 ವಿಶ್ವಕಪ್ ವರದಿ ಮಾಡಲು ಬಾಂಗ್ಲಾದೇಶದ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ನೀಡದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಐಸಿಸಿ ಇತಿಹಾಸದಲ್ಲೇ ಇಂತಹ ಘಟನೆ ಇದೇ ಮೊದಲು ಎನ್ನಲಾಗಿದೆ.
ವಿವಾದದ ಹಿನ್ನೆಲೆ ಏನು?
ರಾಜಕೀಯ ಉದ್ವಿಗ್ನತೆಯ ಕಾರಣ ನೀಡಿ, ಭಾರತದಲ್ಲಿ ತಮ್ಮ ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಭದ್ರತೆ ಇಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆರೋಪಿಸಿತ್ತು. ತಮ್ಮ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಬಿಸಿಬಿ ಪಟ್ಟು ಹಿಡಿದಿತ್ತು. ಆದರೆ, ಕೂಲಂಕಷ ತನಿಖೆಯ ನಂತರ ಭಾರತದಲ್ಲಿ ಯಾವುದೇ ಬೆದರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ ಐಸಿಸಿ, ಪಂದ್ಯಗಳ ಸ್ಥಳಾಂತರಕ್ಕೆ ನಿರಾಕರಿಸಿತು.
ಇದರಿಂದ ಅಸಮಾಧಾನಗೊಂಡ ಬಾಂಗ್ಲಾದೇಶ, ಪ್ರತಿಷ್ಠಿತ ಟಿ20 ವಿಶ್ವಕಪ್‌ನಿಂದಲೇ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿತು. ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಟೂರ್ನಿಗೆ ಸೇರಿಸಿಕೊಳ್ಳಲಾಗಿದೆ.
‘ಸುರಕ್ಷಿತವಲ್ಲ’ ಎಂದಿದ್ದೇ ಮುಳುವಾಯಿತೆ?
ಬಾಂಗ್ಲಾದೇಶ ಸರ್ಕಾರವು ಪದೇ ಪದೇ ಭಾರತಕ್ಕೆ ಪ್ರಯಾಣಿಸುವುದು ‘ಸುರಕ್ಷಿತವಲ್ಲ’ ಎಂದು ಹೇಳಿಕೆ ನೀಡಿತ್ತು. ಇದೀಗ ಇದೇ ಹೇಳಿಕೆಯನ್ನು ಐಸಿಸಿ ಅಸ್ತ್ರವನ್ನಾಗಿ ಬಳಸಿಕೊಂಡಂತಿದೆ. “ಭಾರತಕ್ಕೆ ಬರುವುದು ಸುರಕ್ಷಿತವಲ್ಲ ಎಂದು ಅವರ ಸರ್ಕಾರವೇ ಹೇಳುತ್ತಿರುವಾಗ, ಅಲ್ಲಿನ ಪತ್ರಕರ್ತರಿಗೆ ವೀಸಾ ಅಥವಾ ಮಾನ್ಯತೆ (Accreditation) ನೀಡುವುದರಲ್ಲಿ ಅರ್ಥವಿಲ್ಲ,” ಎಂದು ಹೆಸರು ಹೇಳಲಿಚ್ಛಿಸದ ಐಸಿಸಿ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಬಾಂಗ್ಲಾ ಮಾಧ್ಯಮಗಳ ಆಕ್ರೋಶ
ಐಸಿಸಿಯ ಈ ನಿರ್ಧಾರ ಬಾಂಗ್ಲಾದೇಶದ ಕ್ರೀಡಾ ಪತ್ರಕರ್ತರನ್ನು ಕೆರಳಿಸಿದೆ. 1999ರಿಂದಲೂ ಐಸಿಸಿ ಟೂರ್ನಿಗಳನ್ನು ವರದಿ ಮಾಡುತ್ತಿರುವ ಬಾಂಗ್ಲಾ ಪತ್ರಕರ್ತರಿಗೆ ಇದೇ ಮೊದಲ ಬಾರಿಗೆ ಸಾಮೂಹಿಕವಾಗಿ ಪ್ರವೇಶ ನಿರಾಕರಿಸಲಾಗಿದೆ.
“ಇದು ಅತ್ಯಂತ ದುರದೃಷ್ಟಕರ ಮತ್ತು ದುಃಖಕರ ಸಂಗತಿ. ಫಿಫಾದಂತಹ ಜಾಗತಿಕ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳದ ದೇಶಗಳ ಪತ್ರಕರ್ತರಿಗೂ ಅವಕಾಶ ನೀಡಲಾಗುತ್ತದೆ. ಆದರೆ, ಐಸಿಸಿ ಈ ರೀತಿ ಸಾರಾಸಗಟಾಗಿ ಎಲ್ಲರನ್ನೂ ತಿರಸ್ಕರಿಸಿರುವುದು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಿದಂತಿದೆ,” ಎಂದು ‘ಆಜ್‌ಕೇರ್ ಪತ್ರಿಕಾ’ದ ಕ್ರೀಡಾ ಸಂಪಾದಕ ರಾಣಾ ಅಬ್ಬಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ನಿರ್ಧಾರವು ಶ್ರೀಲಂಕಾದಲ್ಲಿ ನಡೆಯುವ ಪಂದ್ಯಗಳ ವರದಿಗಾರಿಕೆಗೂ ಅಡ್ಡಿಯಾಗುವ ಆತಂಕವಿದೆ. ಈ ಕುರಿತು ಮುಂದಿನ ನಡೆ ನಿರ್ಧರಿಸಲು ಬಾಂಗ್ಲಾದೇಶದ ಕ್ರೀಡಾ ಪತ್ರಕರ್ತರ ಸಂಘಗಳು ಸಭೆ ಸೇರಿ ಚರ್ಚಿಸುತ್ತಿವೆ. ಒಟ್ಟಿನಲ್ಲಿ ಮೈದಾನದ ಹೊರಗಿನ ಈ ರಾಜಕೀಯ ಹಗ್ಗಜಗ್ಗಾಟ, ಕ್ರಿಕೆಟ್ ಉತ್ಸಾಹಕ್ಕೆ ತಣ್ಣೀರೆರಚಿದ್ದಂತೂ ಸುಳ್ಳಲ್ಲ.
ಇದನ್ನೂ ಓದಿ; ರಾಷ್ಟ್ರಪತಿ ಭವನದ ಕಾರ್ಯಕ್ರಮದಲ್ಲಿ ಗಮೋಚಾ ವಿವಾದ | ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಆಕ್ರೋಶ, ಕಾಂಗ್ರೆಸ್ ತಿರುಗೇಟು



















