ಮೈಸೂರು | ಉದಯಗಿರಿಯಲ್ಲಿ ಕಳೆದ ವರ್ಷ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಅಷ್ಟೇ ಅಲ್ಲದೆ ಎರಡು ದಿನಗಳ ಹಿಂದೆ ಯುವಕರು ಮಚ್ಚು, ಲಾಂಗು ಹಿಡಿದು ಓಡಾಡಿದ ವೀಡಿಯೋ ಸಹ ಭಾರಿ ಸುದ್ದಿ ಮಾಡಿತ್ತು. ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮೊದಲೇ ಮತ್ತೊಂದು ಭೀಕರ ಘಟನೆ ಉದಯಗಿರಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬನ ಕೊಲೆಯಾಗಿದ್ದು, ಮತ್ತೊಮ್ಮೆ ಮೈಸೂರಿನಲ್ಲಿ ಹಲ್‌ಚಲ್ ಎಬ್ಬಿಸಿದೆ.
ಗೌಸಿಯಾ ನಗರ ನಿವಾಸಿ ಶಹಬಾಜ್ (26) ಮೃತ ದುರ್ದೈವಿ. ನಗರದ ಬೀಡಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಜುಬೇರ್ ಎಂಬಾತನೇ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ನಡೆಸಿದ ಆರೋಪ ಕೇಳಿಬಂದಿದೆ. ಪ್ರಾಥಮಿಕವಾಗಿ ಸಿಕ್ಕ ಮಾಹಿತಿಯ ಪ್ರಕಾರ ಸಣ್ಣಪುಟ್ಟ ವಿಷಯಕ್ಕೆ ಯುವಕರ ನಡುವೆ ನಡೆದ ಗಲಾಟೆ ಕೊಲೆಯಾಗಿ ಪರಿಣಮಿಸಿದೆ.
ಕೊಲೆಯಾದ ಯುವಕ ಶಹಬಾಜ್ ವೆಲ್ಡಿಂಗ್ ಶಾಪ್ ಹೊಂದಿದ್ದು, ಫೈನಾನ್ಸ್ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ತಿಳಿದುಬಂದಿದೆ. ಏರಿಯಾದಲ್ಲಿ ನಡೆಯುತ್ತಿದ್ದ ಫೈನಾನ್ಸ್ ಹಾವಳಿಗೆ ಒಳಗಾಗಿದ್ದವರಿಂದ ಪೊಲೀಸ್ ಠಾಣೆಗೆ ಶಹಬಾಸ್ ಕಂಪ್ಲೇಂಟ್ ಕೊಡಿಸಿದ್ದ. ಈ ಕಾರಣಕ್ಕಾಗಿಯೇ ನಾಲ್ಕು ತಿಂಗಳ ಹಿಂದೆ ಆರೋಪಿ ತನ್ನ ಸ್ನೇಹಿತರೊಂದಿಗೆ ಶಹಬಾಜ್ ಅಂಗಡಿ ಮುಂದೆ ಬಂದು ಗಲಾಟೆ ಮಾಡಿದ್ದ. ಇದೀಗ ಮತ್ತೊಮ್ಮೆ ನಿನ್ನೆ (ಜನವರಿ 19) ರಾತ್ರಿ 1 ಗಂಟೆ ವೇಳೆ ಅಂಗಡಿ ಮುಚ್ಚಿ ಕುಳಿತಿದ್ದ ಶಹಬಾಜ್ ಮೇಲೆ ಏಕಾಏಕಿ ದಾಳಿ ನಡೆದಿದ್ದು, ಆರೋಪಿಗಳು ತಲೆ, ಎದೆ, ಕತ್ತು, ಹೊಟ್ಟೆಗೆ ಚುಚ್ಚಿ ಹಲ್ಲೆ ನಡೆಸಿದ್ದಾರೆ.
ಸ್ಥಳೀಯರು ತಕ್ಷಣ ಶಹಬಾಜ್ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೊಲೆ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಈ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಉಡುಪಿ | ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರೇ ಗಮನಿಸಿ, ಇನ್ಮುಂದೆ ವಸ್ತ್ರ ಸಂಹಿತೆ ಜಾರಿ



















