ವಡೋದರಾ: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಸದ್ಯದ ಫಾರ್ಮ್ ನೋಡಿದರೆ, ಅವರು ಸದ್ಯಕ್ಕೆ ನಿವೃತ್ತಿಯ ಬಗ್ಗೆ ಯೋಚಿಸುವಂತೆಯೇ ಕಾಣುತ್ತಿಲ್ಲ. ಬದಲಾಗಿ, 2027ರ ವಿಶ್ವಕಪ್ ನಂತರವೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಸೂಚನೆಗಳು ಸಿಗುತ್ತಿವೆ. ನ್ಯೂಜಿಲೆಂಡ್ ವಿರುದ್ಧ ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಪ್ರದರ್ಶಿಸಿದ ಬ್ಯಾಟಿಂಗ್ ವೈಖರಿ ಇದಕ್ಕೆ ಸಾಕ್ಷಿಯಾಗಿದೆ.
ಕಿವೀಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ದರ್ಬಾರ್
ಭಾನುವಾರ (ಜ.11) ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 301 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿತ್ತು. ಈ ವೇಳೆ ವಿರಾಟ್ ಕೊಹ್ಲಿ 93 ರನ್‌ಗಳ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೇವಲ 7 ರನ್ ಅಂತರದಲ್ಲಿ 54ನೇ ಏಕದಿನ ಶತಕ ವಂಚಿತರಾದರೂ, ತಂಡಕ್ಕೆ 4 ವಿಕೆಟ್‌ಗಳ ರೋಚಕ ಜಯ ತಂದುಕೊಡುವಲ್ಲಿ ಅವರು ಯಶಸ್ವಿಯಾದರು. ಟೆಸ್ಟ್ ಮತ್ತು ಟಿ20 ಮಾದರಿಯಿಂದ ದೂರ ಸರಿದಿರುವ 37 ವರ್ಷದ ಕೊಹ್ಲಿ, ಈಗ ಏಕದಿನ ಮಾದರಿಯನ್ನೇ ತಮ್ಮ ಪ್ರಮುಖ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
ಮೊಹಮ್ಮದ್ ಕೈಫ್ ಭವಿಷ್ಯವಾಣಿ
ವಿರಾಟ್ ಕೊಹ್ಲಿ ಅವರ ಪ್ರಸ್ತುತ ಫಾರ್ಮ್ ಮತ್ತು ಫಿಟ್ನೆಸ್ ಕುರಿತು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. “ವಿರಾಟ್ ಕೊಹ್ಲಿ ಸದ್ಯ ದೆಹಲಿ ಸ್ಥಳೀಯ ಲೀಗ್‌ನಲ್ಲಿ ಆಡುವಷ್ಟೇ ಲೀಲಾಜಾಲವಾಗಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿದ್ದಾರೆ. ಅವರು ಮೈದಾನದಲ್ಲಿ ಈಗ ಹೆಚ್ಚು ರಿಲ್ಯಾಕ್ಸ್ ಆಗಿ ಕಾಣುತ್ತಿದ್ದಾರೆ. ಇದೇ ಉತ್ಸಾಹ ಮತ್ತು ಫಿಟ್ನೆಸ್ ಕಾಯ್ದುಕೊಂಡರೆ, ಅವರು ಮುಂದಿನ 5-6 ವರ್ಷಗಳ ಕಾಲ ಭಾರತಕ್ಕಾಗಿ ಆಡಬಹುದು,” ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ. ಅಂದರೆ, ಕೊಹ್ಲಿ 2027ರ ಏಕದಿನ ವಿಶ್ವಕಪ್ ನಂತರವೂ ಮೈದಾನದಲ್ಲಿ ಅಬ್ಬರಿಸುವ ಸಾಧ್ಯತೆಯಿದೆ ಎಂಬುದು ಕೈಫ್ ಅವರ ವಿಶ್ಲೇಷಣೆ.
ವಿಭಿನ್ನ ಹಂತ ತಲುಪಿದ ಕೊಹ್ಲಿ ಆಟ
ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಕೂಡ ಕೊಹ್ಲಿ ಆಟಕ್ಕೆ ಮನಸೋತಿದ್ದಾರೆ. “ಇದು ಕೊಹ್ಲಿಯ ಅತ್ಯುತ್ತಮ ವರ್ಷ ಎಂದು ಹೇಳುವುದು ಕಷ್ಟ, ಏಕೆಂದರೆ ಅವರು ದೀರ್ಘಕಾಲದಿಂದ ಶ್ರೇಷ್ಠ ಆಟಗಾರನೇ ಆಗಿದ್ದಾರೆ. ಆದರೆ ಸದ್ಯ ಅವರು ಆಡುತ್ತಿರುವ ರೀತಿ ನೋಡಿದರೆ, ಬೌಲರ್‌ಗಳ ಯಾವ ತಂತ್ರವೂ ಅವರ ಮುಂದೆ ನಡೆಯುತ್ತಿಲ್ಲ. ಅವರು ಆಟದ ಬೇರೆಯದೇ ಹಂತವನ್ನು ತಲುಪಿದ್ದಾರೆ,” ಎಂದು ಜೇಮಿಸನ್ ಗುಣಗಾನ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕಗಳ ಸುರಿಮಳೆಗೈದಿರುವ ಕೊಹ್ಲಿ, ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದಾರೆ.
ಇದನ್ನೂ ಓದಿ: ಐಸಿಸಿ ಅಸ್ತಿತ್ವಕ್ಕೆ ಅರ್ಥವೇ ಇಲ್ಲ | ಇದು ಭಾರತೀಯರ ಕೈಗೊಂಬೆ : ಪಾಕ್ ಆಟಗಾರ ಕಾಲಕ್ಷೇಪ!



















