ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇದೀಗ ರಷ್ಯಾವನ್ನು ಆರ್ಥಿಕವಾಗಿ ಹತ್ತಿಕ್ಕಲು ಅತ್ಯಂತ ಕಠಿಣ ನಿರ್ಧಾರ ತಳೆದಿದ್ದಾರೆ. ರಷ್ಯಾದಿಂದ ತೈಲ ಮತ್ತು ಯುರೇನಿಯಂ ಖರೀದಿಸುವ ದೇಶಗಳ ಮೇಲೆ ಬರೋಬ್ಬರಿ ಶೇ.500ರಷ್ಟು ಸುಂಕ ವಿಧಿಸುವ ಮಸೂದೆಗೆ ಟ್ರಂಪ್ ಒಪ್ಪಿಗೆ ಸೂಚಿಸಿದ್ದು, ಇದು ಭಾರತದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಏನಿದು ‘ಗ್ರಹಾಂ-ಬ್ಲೂಮೆಂತಾಲ್’ ಮಸೂದೆ?
ಅಮೆರಿಕದ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂತಾಲ್ ಜಂಟಿಯಾಗಿ ಈ ಮಸೂದೆಯನ್ನು ಸಿದ್ಧಪಡಿಸಿದ್ದಾರೆ. ಬುಧವಾರ ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾದ ಸಂಸದ ಗ್ರಹಾಂ, ಈ ಮಸೂದೆಗೆ ಅಧ್ಯಕ್ಷರ ಪೂರ್ಣ ಬೆಂಬಲವಿದೆ ಎಂದು ಖಚಿತಪಡಿಸಿದ್ದಾರೆ.
ಈ ಕಾನೂನು ಜಾರಿಗೆ ಬಂದರೆ, ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂ ಖರೀದಿಸುವ ಭಾರತ, ಚೀನಾ ಮತ್ತು ಬ್ರೆಜಿಲ್ ಮತ್ತಿತರ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಅಮೆರಿಕವು ಭಾರೀ ದಂಡ ಅಥವಾ ಸುಂಕ ವಿಧಿಸುವ ಹಕ್ಕನ್ನು ಹೊಂದಿರಲಿದೆ.
ರಷ್ಯಾವನ್ನು ಆರ್ಥಿಕವಾಗಿ ಹೈರಾಣಾಗಿಸುವ ತಂತ್ರ
“ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಿಲಿಟರಿ ಶಕ್ತಿಗೆ ತೈಲ ರಫ್ತಿನಿಂದ ಬರುವ ಹಣವೇ ಆಧಾರ. ಆ ಮೂಲವನ್ನೇ ಕತ್ತರಿಸುವುದು ನಮ್ಮ ಗುರಿ,” ಎಂದು ಸೆನೆಟರ್ ಗ್ರಹಾಂ ಹೇಳಿದ್ದಾರೆ. ಉಕ್ರೇನ್ ಶಾಂತಿಗಾಗಿ ಹಲವು ರಿಯಾಯಿತಿಗಳನ್ನು ನೀಡಲು ಸಿದ್ಧವಿದ್ದರೂ, ಪುಟಿನ್ ಮಾತ್ರ ದಾಳಿಯನ್ನು ನಿಲ್ಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಷ್ಯಾವನ್ನು ಆರ್ಥಿಕವಾಗಿ ಕಟ್ಟಿಹಾಕುವುದು ಅನಿವಾರ್ಯ ಎಂಬುದು ಟ್ರಂಪ್ ಆಡಳಿತದ ನಿಲುವು.
ಭಾರತದ ಮೇಲೆ ಬೀರುವ ಪರಿಣಾಮವೇನು?
ಭಾರತವು ಪ್ರಸ್ತುತ ರಷ್ಯಾದಿಂದ ರಿಯಾಯಿತಿ ದರದಲ್ಲಿ ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಒಂದು ವೇಳೆ ಈ ಮಸೂದೆ ಕಾನೂನಾಗಿ ಜಾರಿಯಾದರೆ ಭಾರತವು ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ಶೇ. 500ರಷ್ಟು ಸುಂಕ ಬೀಳಲಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಬೆಲೆ ಗಗನಕ್ಕೇರಿ, ವ್ಯಾಪಾರಕ್ಕೆ ಪೆಟ್ಟು ಬೀಳಬಹುದು. ರಷ್ಯಾದೊಂದಿಗಿನ ವ್ಯೂಹಾತ್ಮಕ ಸಂಬಂಧವನ್ನು ಭಾರತ ಮರುಪರಿಶೀಲಿಸಬೇಕಾದ ಅನಿವಾರ್ಯತೆ ಎದುರಾಗಬಹುದು.
ಮುಂದಿನ ವಾರವೇ ನಿರ್ಣಾಯಕ ಮತದಾನ?
ಮೂಲಗಳ ಪ್ರಕಾರ, ಈ ಮಸೂದೆಯ ಮೇಲೆ ಮುಂದಿನ ವಾರವೇ ಅಮೆರಿಕದ ಸೆನೆಟ್‌ನಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿಯೂ ಇದಕ್ಕೆ ಪೂರಕವಾದ ಸಿದ್ಧತೆಗಳು ನಡೆಯುತ್ತಿವೆ. ಜಾಗತಿಕ ವಾಣಿಜ್ಯ ವಲಯದಲ್ಲಿ ಈ ಬೆಳವಣಿಗೆಯು ಈಗ ಭಾರಿ ಸಂಚಲನ ಮೂಡಿಸಿದ್ದು, ಭಾರತವು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಬರುವ ಶೈಕ್ಷಣಿಕ ವರ್ಷದಿಂದ ಶಿಕ್ಷಕರಿಗೆ, ಮಕ್ಕಳಿಗೆ ಫೇಸಿಯಲ್ ಅಟೆಂಡೆನ್ಸ್ ಕಡ್ಡಾಯ | ಮಧುಬಂಗಾರಪ್ಪ



















