ಉಡುಪಿ : ಕಳೆದ ಸೋಮವಾರ (ಜ.5) ಶೆಟ್ರಕಟ್ಟೆಯಲ್ಲಿ ಟಿಪ್ಪರ್ ಒಂದು ಬಸ್‌ಗೆ ಡಿಕ್ಕಿ ಹೊಡೆದು ಹಲವು ಮಂದಿ ಗಂಭೀರ ಗಾಯಗೊಂಡ ಘಟನೆ ಬಗ್ಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿರುವ ನಡುವೆಯೇ ಕೋಟೇಶ್ವರದಲ್ಲಿ ಬುಧವಾರ (ಜ.7) ಮತ್ತೊಂದು ಟಿಪ್ಪರ್ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ದ್ವಿಚಕ್ರ ಸವಾರರೊಬ್ಬರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಟಿಪ್ಪರ್‌ಗಳಿಗೆ ವೇಗಮಿತಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಆರು ಚಕ್ರ ಮತ್ತು ಅದಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಮರಳು, ಕೆಂಪುಕಲ್ಲು ಮತ್ತಿತರ ಸಾಮಗ್ರಿ ಸಾಗಾಟದ ವಾಹನಗಳು ಇನ್ನು ಮುಂದೆ ಕಡ್ಡಾಯವಾಗಿ ವೇಗ ನಿಯಂತ್ರಕ ಅಳವಡಿಸಬೇಕು ಎಂದು ಸೂಚನೆ ನೀಡಲಾಗಿದೆ.ಅಲ್ಲದೇ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಡುಪಿ ಎಸ್‌ಪಿ ಹರಿರಾಂ ಶಂಕರ್ ಅವರು ತಿಳಿಸಿದ್ದಾರೆ.
ವೇಗ ನಿಯಂತ್ರಕವು 60 ಕಿ.ಮೀ. ವೇಗಕ್ಕೆ ಸೀಮಿತವಾಗಿರಬೇಕು. ಜಿಲ್ಲೆಯಲ್ಲಿ ಟಿಪ್ಪರ್‌ಗಳ ಆಟಾಟೋಪಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದಲೇ ಈ ಸಭೆಯನ್ನು ಕರೆಯಲಾಗಿತ್ತು. ವೇಗ ನಿಯಂತ್ರಕ ಅಳವಡಿಕೆಗೆ 10 ದಿನಗಳ ಗಡುವನ್ನೂ ನೀಡಲಾಗಿದೆ. ಈ ಸಂಬಂಧ ಎಲ್ಲ ಲಾರಿ – ಟಿಪ್ಪರ್ ಚಾಲಕ ಮಾಲಕರಿಗೆ ಕರಪತ್ರಗಳನ್ನು ಹಂಚಲಾಗುವುದು. ಅದೇ ರೀತಿ ಜ.20ರ ಒಳಗೆ ಎಲ್ಲ ಬಸ್‌ಗಳೂ ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸಿಕೊಳ್ಳಬೇಕು. ತಪ್ಪಿದಲ್ಲಿ ದಂಡ ಸಹಿತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.
ಇದನ್ನೂ ಓದಿ : ಸೈಟುಗಳ ಸೆಟ್‌ಬ್ಯಾಕ್ ಇಳಿಕೆ ಮಾಡಿ GBA ಅಂತಿಮ ಆದೇಶ | ಹೊಸ ಪಟ್ಟಿಯಂತೆ ನಿವೇಶನದ ಸುತ್ತ ಎಷ್ಟು ಜಾಗ ಬಿಡಬೇಕು?



















