ತುಮಕೂರು : ಕಲ್ಪತರು ನಾಡು ತುಮಕೂರಿನ ಪ್ರಸಿದ್ಧ ದೇವರಾಯನದುರ್ಗ ಅರಣ್ಯದಲ್ಲಿ ಬರೋಬ್ಬರಿ 11 ಮಂಗಗಳ ಸರಣಿ ಸಾವನ್ನಪ್ಪಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ದೇವರಾಯನದುರ್ಗ ಮತ್ತು ದುರ್ಗದ ಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಮಂಗಗಳ ಮೃತದೇಹ ಬಿದ್ದಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಅರಣ್ಯದಲ್ಲಿ ಶೋಧ ನಡೆಸಿದಾಗ, ಮೊದಲ ದಿನ ಏಳು ಮತ್ತು ಎರಡನೇ ದಿನ ನಾಲ್ಕು ವಾನರಗಳ ಶವ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಕಪಿಗಳು ಯಾವುದೇ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿಲ್ಲ ಎಂಬುದು ದೃಢಪಟ್ಟಿದೆ. ಊರ್ಡಿಗೆರೆಯ ಪಶು ಆಸ್ಪತ್ರೆಯಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯ ವೇಳೆ ಮಂಗಗಳ ಕರುಳಿನಲ್ಲಿ ಅನ್ನ ಪತ್ತೆಯಾಗಿದ್ದು, ಅನ್ನದಲ್ಲಿ ವಿಷ ಬೆರೆಸಿ ಈ ಕೃತ್ಯ ಎಸಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
500-200 ಮೀಟರ್ ಅಂತರದಲ್ಲಿ ಒಂಬತ್ತು ಮಂಗ ಹಾಗೂ ಎರಡು ಲಂಗೂರ ಕಳೇಬರ ಪತ್ತೆಯಾಗಿದೆ. ಈಗಾಲೇ ಜಿಲ್ಲಾಡಳಿತವು ಮೃತ ದೇಹಗಳ ಮಾದರಿಯನ್ನ ಬೆಂಗಳೂರಿನ ಪಶು ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಟ್ಟಿದೆ. ಇಂದು ಅಥವಾ ನಾಳೆ ವರದಿ ಬರುವ ಸಾಧ್ಯತೆಯಿದೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ | ಕಾರಣ ನಿಗೂಢ!



















