ಬೆಂಗಳೂರು: ಕೋಗಿಲು ಲೇಔಟ್‌ನ ಅಕ್ರಮ ವಲಸಿಗರಿಗೆ ಮನೆ ಭಾಗ್ಯ ಕರುಣಿಸುತ್ತಿರೋ ಸರ್ಕಾರದ ನಡೆಗೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ಕೊಗೀಲು ಲೇಔಟ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ನಾಳೆ ನಡೆಯುವ ಪ್ರತಿಭಟನೆಯಲ್ಲಿ ಪಟ ಪಟ ಚಡ್ಡಿ ಧರಿಸಿ, ನಮಗೂ ನಿವೇಶನ ನೀಡಿ, ನಮ್ಮ ಬಳಿಯೂ ಆಧಾರ್, ಪಾನ್, ರೇಷನ್ ಕಾರ್ಡ್ ಇದೆ. ನಾವೂ ನಿವೇಶನ ಪಡೆಯುವುದಕ್ಕೆ ಅರ್ಹರು, ನಮಗೂ ಫ್ಲ್ಯಾಟ್ ಕೊಡಿ ಎಂದು ಕರವೇ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಮುಂದುವರೆದು, ಅಕ್ರಮ ವಲಸಿಗರಿಗೆ ಮನೆ ಕೊಡುತ್ತಿರುವುದು ಸರಿಯಲ್ಲ, ವಲಸಿಗರ ಬದಲು ಕನ್ನಡ ಹೋರಾಟಗಾರರಿಗೆ, ಅವರ ಮಕ್ಕಳಿಗೆ ನಿವೇಶನ ನೀಡಿ. ದೀನದಲಿತರಿಗೆ, ರೈತರಿಗೆ, ಉತ್ತರ ಕರ್ನಾಟಕದ ಭಾಗದಿಂದ ಕೆಲಸಕ್ಕೆ ಬಂದಿರುವವರಿಗೆ ಅಥವಾ ಮಂಡ್ಯ, ಮೈಸೂರು, ಚಾಮರಾಜನಗರದವರಿಗೆ ಫ್ಲ್ಯಾಟ್ ಕೊಡಿ ಎಂದು ಆಗ್ರಹಿಸಿದ್ದಾರೆ.
ನಮ್ಮ ಜಾಗ ವಲಸಿಗರ ಪಾಲಾಗುತ್ತಿದ್ದು, ಸರ್ಕಾರಿ ಜಾಗದಲ್ಲಿ ವಲಸಿರಿಗೆ ಮನೆಗಳನ್ನು ನೀಡಿ, ನಮಗೆ ಸಿಗದ ರೀತಿ ಆಗುತ್ತಿದೆ. ಹೈ ಕಮಾಂಡ್ ನೀತಿಯನ್ನು ಬಿಟ್ಟು, ನಾಡಿನ ಪರ ನಿಲುವು ತಗೆದುಕೊಳ್ಳಿ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆತ ಪ್ರಕರಣ | ಮೂವರು ಅಪ್ರಾಪ್ತರು ವಶ



















