ಉತ್ತರ ಕನ್ನಡ | ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು ಕಾರವಾರದ ಕದಂಬ ನೌಕಾನೆಲೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತೀಯ ನೌಕಾಪಡೆಯ ಅತ್ಯಾಧುನಿಕ ‘ಐ.ಎನ್.ಎಸ್. ವಾಗ್ಶೀರ್’ (INS Vagsheer) ಸಬ್‌ಮೇರಿನ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಯಶಸ್ವಿ ಪಯಣ ಬೆಳೆಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ನೌಕಾಪಡೆಯ ಪರಾಕ್ರಮವನ್ನು ಹತ್ತಿರದಿಂದ ವೀಕ್ಷಿಸಿದ ರಾಷ್ಟ್ರಪತಿಗಳು, ಐ.ಎನ್.ಎಸ್. ವಾಗ್ಶೀರ್ ಸಬ್‌ಮೇರಿನ್‌ನಲ್ಲಿ ಸಮುದ್ರದ ಆಳಕ್ಕೆ ಇಳಿದು ಪ್ರಯಾಣಿಸಿದ್ದಾರೆ. ಈ ಮೂಲಕ ಸಬ್‌ಮೇರಿನ್‌ನಲ್ಲಿ ಪ್ರಯಾಣಿಸಿದ ದೇಶದ ಎರಡನೇ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಮುರ್ಮು ಪಾತ್ರರಾಗಿದ್ದಾರೆ.
ಈ ಸಾಹಸಮಯ ಪಯಣದ ವೇಳೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಹಾಗೂ ಕರ್ನಾಟಕ ನೌಕಾ ವಲಯದ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಅವರು ರಾಷ್ಟ್ರಪತಿಗಳ ಜೊತೆಗಿದ್ದು, ಜಲಾಂತರ್ಗಾಮಿಯ ಕಾರ್ಯವೈಖರಿಯ ಬಗ್ಗೆ ರಾಷ್ಟ್ರಪತಿಗೆ ಮಾಹಿತಿ ನೀಡಿದ್ದಾರೆ.
ಭಾರತೀಯ ನೌಕಾಪಡೆಯ ಸಾಮರ್ಥ್ಯ ಮತ್ತು ಸನ್ನದ್ಧತೆಯನ್ನು ಶ್ಲಾಘಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನೌಕಾಪಡೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಅವರ ಸೇವೆಯನ್ನು ಕೊಂಡಾಡಿದ್ದಾರೆ.

ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿಯವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಉಪಸ್ಥಿತರಿದ್ದರು. ನೌಕಾಪಡೆಯ ಪರವಾಗಿ ಫೀಲ್ಡ್ ಆಫೀಸರ್ ಕಮಾಂಡೆಂಟ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮತ್ತು ಹಿರಿಯ ಅಧಿಕಾರಿಗಳು ಗೌರವ ಸಲ್ಲಿಸಿದರು.
ಇದನ್ನೂ ಓದಿ : ‘ಟಾಕ್ಸಿಕ್’ನಲ್ಲಿ ಎಲಿಜಬೆತ್ ಪೋಸ್ಟರ್ ಔಟ್ | ಹೇಗಿದೆ ನೋಡಿ ಹುಮಾ ಖುರೇಷಿ ಫಸ್ಟ್ ಲುಕ್!



















