ನವದೆಹಲಿ: ಭಾರತೀಯ ಆದಾಯ ತೆರಿಗೆ ಇಲಾಖೆಯು ಡಿಜಿಟಲ್ ಯುಗಕ್ಕೆ ತಕ್ಕಂತೆ ತನ್ನ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುತ್ತಿದ್ದು, 2026ರ ಏಪ್ರಿಲ್ 1 ರಿಂದ ತೆರಿಗೆ ಅಧಿಕಾರಿಗಳಿಗೆ ತೆರಿಗೆದಾರರ ಡಿಜಿಟಲ್ ಖಾತೆಗಳನ್ನು ಪರಿಶೀಲಿಸುವ ವಿಶೇಷ ಅಧಿಕಾರ ಸಿಗಲಿದೆ. ಪ್ರಸ್ತಾಪಿತ ‘ಆದಾಯ ತೆರಿಗೆ ಮಸೂದೆ, 2025’ರ (Income Tax Bill, 2025) ಅನ್ವಯ, ತೆರಿಗೆ ವಂಚನೆಯ ಶಂಕೆ ಇದ್ದರೆ ಅಧಿಕಾರಿಗಳು ನಿಮ್ಮ ಬ್ಯಾಂಕ್ ಖಾತೆ, ಇಮೇಲ್ ಮತ್ತು ಸಾಮಾಜಿಕ ಜಾಲತಾಣದ ಖಾತೆಗಳನ್ನು ಪ್ರವೇಶಿಸಬಹುದಾಗಿದೆ.
ಏನಿದು ಹೊಸ ನಿಯಮ?
ಪ್ರಸ್ತುತ ಇರುವ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 132ರ ಪ್ರಕಾರ, ತೆರಿಗೆ ಅಧಿಕಾರಿಗಳು ನಗದು, ಚಿನ್ನಾಭರಣ, ಆಸ್ತಿ ಪತ್ರಗಳಂತಹ ಭೌತಿಕ ಆಸ್ತಿಗಳನ್ನು ಮಾತ್ರ ಪರಿಶೀಲಿಸಲು ಮತ್ತು ಜಪ್ತಿ ಮಾಡಲು ಅವಕಾಶವಿತ್ತು. ಆದರೆ, ಹೊಸ ಮಸೂದೆಯ ಅಡಿಯಲ್ಲಿ ಅಧಿಕಾರಿಗಳು “ವರ್ಚುವಲ್ ಡಿಜಿಟಲ್ ಸ್ಪೇಸ್” (Virtual Digital Space) ಅನ್ನು ಪ್ರವೇಶಿಸಬಹುದು. ಅಂದರೆ, ಇನ್ನು ಮುಂದೆ ತೆರಿಗೆ ಅಧಿಕಾರಿಗಳ ಶೋಧ ಕಾರ್ಯಾಚರಣೆಯು ಕೇವಲ ಮನೆಯ ಬೀರು ಅಥವಾ ಲಾಕರ್‌ಗಳಿಗೆ ಸೀಮಿತವಾಗಿರುವುದಿಲ್ಲ. ಅವರು ಈ ಕೆಳಗಿನ ಡಿಜಿಟಲ್ ತಾಣಗಳನ್ನು ಪರಿಶೀಲಿಸಬಹುದು:
-ಇಮೇಲ್ ಖಾತೆಗಳು
-ಸಾಮಾಜಿಕ ಜಾಲತಾಣಗಳ ಖಾತೆಗಳು
- ಕ್ಲೌಡ್ ಸ್ಟೋರೇಜ್
- ಆನ್‌ಲೈನ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ವ್ಯಾಲೆಟ್‌ಗಳು
- ಷೇರು ಮಾರುಕಟ್ಟೆ ಮತ್ತು ಹೂಡಿಕೆ ಪ್ಲಾಟ್‌ಫಾರ್ಮ್‌ಗಳು
ಸರ್ಕಾರದ ಉದ್ದೇಶವೇನು?
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಆರ್ಥಿಕ ವಹಿವಾಟುಗಳು ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ಕ್ರಿಪ್ಟೋಕರೆನ್ಸಿ, ವಿದೇಶಿ ಟ್ರೇಡಿಂಗ್ ಖಾತೆಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಹಣದ ಹರಿವು ಹೆಚ್ಚಾಗಿದೆ. ಸಾಂಪ್ರದಾಯಿಕ ಶೋಧ ವಿಧಾನಗಳಿಂದ ಇಂತಹ ಡಿಜಿಟಲ್ ಮೂಲಕ ನಡೆಯುವ ತೆರಿಗೆ ವಂಚನೆಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಘೋಷಿತ ಆದಾಯ ಮತ್ತು ಆಸ್ತಿಯನ್ನು ಪತ್ತೆಹಚ್ಚಲು ಡಿಜಿಟಲ್ ವಲಯಕ್ಕೂ ಶೋಧ ಮತ್ತು ಜಪ್ತಿ ಅಧಿಕಾರವನ್ನು ವಿಸ್ತರಿಸಲಾಗುತ್ತಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
ಖಾಸಗಿತನಕ್ಕೆ ಧಕ್ಕೆಯೇ?
ಈ ಹೊಸ ನಿಯಮವು ಅಧಿಕಾರಿಗಳಿಗೆ ಎಲ್ಲರ ಖಾತೆಗಳನ್ನು ಮನಬಂದಂತೆ ನೋಡುವ ಅಧಿಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಭೌತಿಕ ದಾಳಿಗಳಂತೆಯೇ, ಡಿಜಿಟಲ್ ಶೋಧನೆಗೂ “ವಂಚನೆಯ ಶಂಕೆ” ಇರಲೇಬೇಕು. ತೆರಿಗೆ ವಂಚನೆಯ ಬಗ್ಗೆ ಬಲವಾದ ಆಧಾರಗಳಿದ್ದರೆ ಮಾತ್ರ ಅಧಿಕಾರಿಗಳು ಈ ಡಿಜಿಟಲ್ ಖಾತೆಗಳನ್ನು ಪರಿಶೀಲಿಸಲು ಸಾಧ್ಯ. ಆದರೆ, ವೈಯಕ್ತಿಕ ಇಮೇಲ್ ಮತ್ತು ಸಾಮಾಜಿಕ ಮಾಧ್ಯಮಗಳ ಸಂದೇಶಗಳನ್ನು ನೋಡುವ ಅಧಿಕಾರ ನೀಡಿರುವುದರಿಂದ, ಇದು ನಾಗರಿಕರ ಖಾಸಗಿತನದ ಹಕ್ಕಿನ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.
ಸಾಮಾನ್ಯ ತೆರಿಗೆದಾರರಿಗೆ ತೊಂದರೆಯೇ?
ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಸಾಮಾನ್ಯ ಜನರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ. ಆದರೆ, ತೆರಿಗೆ ವಂಚನೆಯ ಶಂಕೆ ಇರುವ ವ್ಯಕ್ತಿಗಳ ಮೇಲೆ ನಿಗಾ ಇಡಲು ಮತ್ತು ಅಘೋಷಿತ ಆದಾಯದ ಮೂಲವನ್ನು ಪತ್ತೆಹಚ್ಚಲು ಅಧಿಕಾರಿಗಳು ಡಿಜಿಟಲ್ ಸಂಭಾಷಣೆಗಳನ್ನು ಸಾಕ್ಷಿಯಾಗಿ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ



















