ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರ ಬುಧವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ಕಂಪನಿಗಳು ತಮ್ಮ ಶೇ.50ರಷ್ಟು ಉದ್ಯೋಗಿಗಳಿಗೆ ಕಡ್ಡಾಯವಾಗಿ ಮನೆಯಿಂದಲೇ ಕೆಲಸ (Work From Home) ಮಾಡಲು ಸೂಚಿಸಬೇಕು ಎಂದಿದೆ.

ಪ್ರಸ್ತುತ ದೆಹಲಿಯಲ್ಲಿ ಗ್ರ್ಯಾಪ್-4 (GRAP IV) ಅಡಿಯಲ್ಲಿ ಅತಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು, ಈ ಹೊಸ ಆದೇಶವನ್ನು ಪಾಲಿಸದ ಕಂಪನಿಗಳಿಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ದೆಹಲಿಯ ಪರಿಸ್ಥಿತಿ ಏನಿದೆ?
ಡಿಸೆಂಬರ್ 15 ರಂದು ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ ಬರೋಬ್ಬರಿ 498ಕ್ಕೆ ತಲುಪುವ ಮೂಲಕ ‘ಅತಿ ಗಂಭೀರ’ ಹಂತವನ್ನು ತಲುಪಿತ್ತು. ಶನಿವಾರದಿಂದ ಸೋಮವಾರದವರೆಗೆ ದೆಹಲಿಯನ್ನು ದಟ್ಟವಾದ ಹೊಗೆ ಆವರಿಸಿಕೊಂಡಿದ್ದರಿಂದ ರಸ್ತೆ ಅಪಘಾತಗಳು ಸಂಭವಿಸಿದ್ದವು ಮತ್ತು ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಉಂಟಾಗಿತ್ತು. ಮಂಗಳವಾರ ಮತ್ತು ಬುಧವಾರದಂದು ಭಾರೀ ಗಾಳಿಯಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು, ಎಕ್ಯೂಐ 329ಕ್ಕೆ ಇಳಿದಿದೆ. ಆದರೂ ಇದು ‘ಅತ್ಯಂತ ಕಳಪೆ’ ವಿಭಾಗದಲ್ಲೇ ಮುಂದುವರಿದಿದೆ.
ಇತರೆ ಪ್ರಮುಖ ನಿರ್ಬಂಧಗಳು ಮತ್ತು ಘೋಷಣೆಗಳು:
ಕಾರ್ಮಿಕರಿಗೆ ಪರಿಹಾರ: ಮಾಲಿನ್ಯ ನಿಯಂತ್ರಣದ ಭಾಗವಾಗಿ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಲಾಗಿದೆ. ಇದರಿಂದ ಕೆಲಸ ಕಳೆದುಕೊಂಡಿರುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ದೆಹಲಿ ಸರ್ಕಾರವು ತಲಾ 10,000 ರೂ. ಪರಿಹಾರ ಘೋಷಿಸಿದೆ.
ವಾಹನ ಸಂಚಾರಕ್ಕೆ ಬ್ರೇಕ್: ಬಿಎಸ್-6 (BS-VI) ಮಾನದಂಡಗಳನ್ನು ಹೊಂದಿರದ ಹೊರ ರಾಜ್ಯದ ವಾಹನಗಳು ದೆಹಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ನೋ ಪಿಯುಸಿ, ನೋ ಫ್ಯುಯೆಲ್: ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡದಿರಲು ನಿರ್ಧರಿಸಲಾಗಿದೆ.
ಶಾಲೆಗಳಿಗೆ ಹೈಬ್ರಿಡ್ ಕ್ಲಾಸ್: 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ಆಫ್‌ಲೈನ್ (ಹೈಬ್ರಿಡ್ ಮೋಡ್) ಮಾದರಿಯಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.
ಸಚಿವರ ಸ್ಪಷ್ಟನೆ
ಮಾಲಿನ್ಯದ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, “ಕೇವಲ 9ರಿಂದ 10 ತಿಂಗಳಲ್ಲಿ ಮಾಲಿನ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಯಾವುದೇ ಸರ್ಕಾರಕ್ಕೂ ಸಾಧ್ಯವಿಲ್ಲ,” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬುರ್ಖಾ ಧರಿಸದಿದ್ದಕ್ಕೆ ಪತ್ನಿ, ಇಬ್ಬರು ಪುತ್ರಿಯರ ಹತ್ಯೆ : ಮನೆಯಲ್ಲೇ ಶವ ಹೂತು ಹಾಕಿದ ಪಾಪಿ ಪತಿ!


















