ಬೆಂಗಳೂರು : ಈಗೀಗ ಪಾರಿವಾಳಗಳಿಂದಲೂ ಕಾಯಿಲೆಗಳು ಹರಡುತ್ತಿರುವು ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ಜಿಬಿಎ ನಿಷೇಧಿಸಿದೆ. ಹೌದು.. ಇನ್ಮುಂದೆ ಜಿಬಿಎ ಗುರುತಿಸಿರುವ ಸ್ಥಳದಲ್ಲಿ ಮಾತ್ರ, ನಿಗದಿತ ಸಮಯದಲ್ಲಿ ಪಾರಿವಾಳಗಳಿಗೆ ಆಹಾರ ನೀಡಬೇಕು. ಇದನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತ (ಬಿಎನ್ ಎಸ್) 200, 271 ಮತ್ತು 271ರಂತೆ ಪ್ರಕರಣ ದಾಖಲಿಸಿ, ದಂಡ ಹಾಕುವ ಜೊತೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಯಾವುದೇ ವ್ಯಕ್ತಿಯು ಸಾರ್ವಜನಿಕರಿಗೆ ತೊಂದರೆ ಅಥವಾ ಆರೋಗ್ಯಕ್ಕೆ ಅಪಾಯವನ್ನು ಕಾಂಟುಮಾಡುವ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಬಾರದು ಅಥವಾ ಆಹಾರವನ್ನು ನೀಡಲು ಪ್ರೇರೇಪಿಸಬಾರದು, ಪಾರಿವಾಳಗಳಿಗೆ ಆಹಾರವನ್ನು ನೀಡುವುದನ್ನು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಷರತ್ತುಗಳೊಂದಿಗೆ ಅನುಮತಿಸಲಾಗುತ್ತದೆ. ನಿಗದಿಪಡಿಸಿದ ಪ್ರದೇಶಗಳ ನಿರ್ವಹಣೆ ಮತ್ತು ನಿರ್ದೇಶನಗಳ ಅನುಸರಣೆಯ ಜವಾಬ್ದಾರಿಯನ್ನು ಕೆಲವು ಎನ್‌ಜಿಓ ವಹಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಅನಿಯಂತ್ರಿತವಾಗಿ ಆಹಾರ ನೀಡುವುದರಿಂದ ಪಕ್ಷಿಗಳು ದೊಡ್ಡ ಪ್ರಮಾಣದಲ್ಲಿ ಗುಂಪು ಸೇರುತ್ತಿದ್ದು, ಅತಿಯಾದ ಹಿಕ್ಕೆಗಳು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳಿಂದ ಶ್ವಾಸಕೋಶದ ಕಾಯಿಲೆಗಳಾದ ಅತಿಸಂವೇದನಾ ನ್ಯುಮೋನಿಟಿಸ್ ಮತ್ತು ಇತರ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿವೆ.

ತಜ್ಞರ ವೈದ್ಯಕೀಯ ಅಭಿಪ್ರಾಯ ಮತ್ತು ವರದಿಗಳು ಸೂಚಿಸುವಂತೆ ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳ ಸಂಪರ್ಕದಿಂದ ಶ್ವಾಸಕೋಶದ ಹಾನಿಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಮೊದಲೇ ಉಸಿರಾಟದ ಸಮಸ್ಯೆ ಇರುವ ದುರ್ಬಲ ವ್ಯಕ್ತಿಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ. ಹೀಗಾಗಿ, ಪಾರಿವಾಳಗಳ ಹಿಕ್ಕೆಗಳು ಮತ್ತು ಗರಿಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರ ಬಗ್ಗೆ ನಗರ ಪಾಲಿಕೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.
ಇದನ್ನೂ ಓದಿ : ಬುರ್ಖಾ ಧರಿಸದಿದ್ದಕ್ಕೆ ಪತ್ನಿ, ಇಬ್ಬರು ಪುತ್ರಿಯರ ಹತ್ಯೆ : ಮನೆಯಲ್ಲೇ ಶವ ಹೂತು ಹಾಕಿದ ಪಾಪಿ ಪತಿ!



















