ಬೆಂಗಳೂರು: ದೇಶದ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಕೂಡ ಸಿಹಿ ಸುದ್ದಿ ನೀಡಿದೆ. ಹೌದು, ದೇಶದ ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಆಗಿರುವ ಎಸ್ ಬಿಐ ಈಗ ಸಾಲದ ಮೇಲಿನ ಬಡ್ಡಿದರದಲ್ಲಿ 25 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದೆ. ಇದರಿಂದಾಗಿ, ಈಗಾಗಲೇ ಸಾಲಪಡೆದವರು ಹಾಗೂ ಸಾಲ ಪಡೆಯುವವರಿಗೆ ಬಡ್ಡಿಯ ಹೊರೆಯಲ್ಲಿ ಇಳಿಕೆಯಾಗಲಿದೆ.
ಸಾಲದ ಮೇಲಿನ ಬಡ್ಡಿದರವನ್ನು ನಿರ್ಧರಿಸಲು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್-ಬೇಸ್ಟ್ ಲೆಂಡಿಂಗ್ ರೇಟ್ (MCLR) ಮಾನದಂಡವಾಗಿದೆ. ಅಂದರೆ, ಬ್ಯಾಂಕುಗಳು ಸಾಲ ನೀಡುವಾಗ ವಿಧಿಸುವ ಕನಿಷ್ಠ ಬಡ್ಡಿ ದರ. ಇದು ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳಂತಹ ಫ್ಲೋಟಿಂಗ್ ರೇಟ್ ಸಾಲಗಳಿಗೆ ಮಾನದಂಡವಾಗಿದೆ. ಹಾಗಾಗಿ, ಆರ್ ಬಿಐ 25 ಬೇಸಿಸ್ ಪಾಯಿಂಟ್ ಗಳನ್ನು ಇಳಿಸಿರುವುದು ಸಾಲಗಾರರಿಗೆ ಅನುಕೂಲವಾಗಲಿದೆ.
ಡಿಸೆಂಬರ್ 3ರಿಂದ 5ರವರೆಗೆ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆ ನಡೆದಿತ್ತು. ಡಿಸೆಂಬರ್ 5ರಂದು ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್ ಗಳನ್ನು ಆರ್ ಬಿಐ ಇಳಿಕೆ ಮಾಡಿತ್ತು. ಈಗ ರೆಪೊ ದರವು ಶೇ.5.25ರಷ್ಟಿದೆ. ಆರ್ ಬಿಐ ರೆಪೊ ದರದ ಇಳಿಕೆಯಿಂದಾಗಿ ಎಸ್ ಬಿಐ ಕೂಡ ಈಗ ಬಡ್ಡಿದರವನ್ನು ಇಳಿಕೆ ಮಾಡಿದೆ. ಇನ್ನೂ ಹಲವು ಬ್ಯಾಂಕ್ ಗಳು ಶೀಘ್ರದಲ್ಲೇ ಘೋಷಣೆ ಮಾಡಲಿವೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದ ಬಳಿಕ ನಿಶ್ಚಿತ ಠೇವಣಿ ಸೇರಿ ಹಲವು ಹೂಡಿಕೆಗಳ ಮೇಲಿನ ಬಡ್ಡಿಯನ್ನು ಇಳಿಕೆ ಮಾಡುತ್ತಿವೆ. ಎಸ್ ಬಿಐ ಕೂಡ ಈಗ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರದಲ್ಲಿ ಇಳಿಕೆ ಮಾಡಿದೆ. ಇದರಿಂದ ಹೂಡಿಕೆದಾರರಿಗೆ ಸಿಗುವ ಲಾಭದಲ್ಲಿ ಇಳಿಕೆಯಾಗಲಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಇನ್ನುಮುಂದೆ ತುಟ್ಟಿ ಭತ್ಯೆಯೇ ಸಿಗಲ್ಲ? ಸರ್ಕಾರ ಹೇಳೋದೇನು?



















