ರಾಮನಗರ : ಮಾಜಿ ಸಚಿವ ಹೆಚ್ ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ನಡೆದಿದೆ.

ರೇವಣ್ಣ ಪುತ್ರ ಶಶಾಂಕ್ ಫಾರ್ಚೂನರ್ ಕಾರು ಬೈಕಿಗೆ ಡಿಕ್ಕಿ ಹೊಡೆದು ಸವಾರ ರಾಜೇಶ್ (23) ಸಾವನ್ನಪ್ಪಿದ್ದಾರೆ. ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಟೋಲ್ ನೂರು ಮೀಟರ್ ಬಳಿ ಕಾರು ಗುದ್ದಿದೆ. ಗುರುವಾರ ರಾತ್ರಿ 10:30ರ ಸುಮಾರಿಗೆ ಅಪಘಾತ ಎಸಗಿದ ಬಳಿಕ ಶಶಾಂಕ್ ಕಾರಿನೊಂದಿಗೆ ಪರಾರಿಯಾಗಿದ್ದರು. ಈ ವಿಚಾರ ತಿಳಿದ ಸ್ಥಳೀಯರು 5 ಕಿ.ಮೀ. ಹಿಂಬಾಲಿಸಿ ಸನ್ ಫ್ಲವರ್ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಕಾರನ್ನು ತಡೆದು ನಿಲ್ಲಿಸಿದ್ದಾರೆ.

ಕಾರಿನಿಂದ ಇಳಿದ ಬಳಿಕ ಶಶಾಂಕ್ ನಾನು ಯಾರು ಗೊತ್ತಾ? ಹೆಚ್‌ಎಂ ರೇವಣ್ಣ ಪುತ್ರ ಎಂದು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ನಂತರ ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಶಶಾಂಕ್ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರಿನಲ್ಲಿ ರೇವಣ್ಣ ಕುಟುಂಬಸ್ಥರು ಇದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹಿಟ್ ಆಂಡ್ ರನ್ ವಿಚಾರ ದೊಡ್ಡದಾಗುತ್ತಿದ್ದಂತೆ ತಡರಾತ್ರಿ ಫಾರ್ಚೂನರ್ ಕಾರನ್ನು ಕುದೂರು ಪೊಲೀಸ್ ಠಾಣೆಗೆ ತರಲಾಗಿದೆ. ಸದ್ಯ ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಕುದೂರು ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಹೆಚ್ಚಿನ ಮಾಹಿತಿ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ : ಬೈಂದೂರು ರೈತರ ಹೋರಾಟ ಪರ ಸದನದಲ್ಲಿ ಪ್ರತಿಧ್ವನಿ | ಕಲಾಪದ ವೇಳೆ ಸರ್ಕಾರದ ಗಮನ ಸೆಳೆದ ಶಾಸಕ ಗುರುರಾಜ್ ಗಂಟಿಹೊಳೆ



















