ಪಣಜಿ: ಉತ್ತರ ಗೋವಾದ ಅರ್ಪೋರಾದಲ್ಲಿರುವ ‘ಬರ್ಚ್ ಬೈ ರೋಮಿಯೋ ಲೇನ್’ ನೈಟ್‌ಕ್ಲಬ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 25 ಜನರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ವಾರಾಂತ್ಯದ ಮೋಜಿನ ಪಾರ್ಟಿ ಕ್ಷಣಾರ್ಧದಲ್ಲಿ ಸಾವಿನ ಮನೆಯಾಗಿ ಬದಲಾಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ತಾಳೆಗರಿಯಿಂದ ಹಬ್ಬಿದ ಬೆಂಕಿ
ವಾರಾಂತ್ಯದ ಹಿನ್ನೆಲೆಯಲ್ಲಿ ಕ್ಲಬ್‌ನಲ್ಲಿ ‘ಬಾಲಿವುಡ್ ನೈಟ್’ ಆಯೋಜಿಸಲಾಗಿತ್ತು ಮತ್ತು ನೂರಾರು ಪ್ರವಾಸಿಗರು ಅಲ್ಲಿ ಜಮಾಯಿಸಿದ್ದರು. ಕ್ಲಬ್‌ನ ಒಳಾಂಗಣವನ್ನು ತಾಳೆಗರಿಗಳಿಂದ (Palm leaves) ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು. ಬೆಂಕಿ ಹೊತ್ತಿಕೊಂಡ ತಕ್ಷಣ ಒಣಗಿದ ತಾಳೆಗರಿಗಳು ಧಗಧಗನೆ ಉರಿಯಲಾರಂಭಿಸಿ ಇಡೀ ಕ್ಲಬ್ ಅನ್ನು ಆವರಿಸಿಕೊಂಡವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಕ್ಷಣೆಗೆ ಅಡ್ಡಿಯಾದ ಕಿರಿದಾದ ರಸ್ತೆ
ಅಗ್ನಿಶಾಮಕ ದಳಕ್ಕೆ ಸ್ಥಳಕ್ಕೆ ತಲುಪಲು ಪ್ರಮುಖ ಅಡ್ಡಿಯಾಗಿದ್ದು ಕಿರಿದಾದ ರಸ್ತೆಗಳು. ಕ್ಲಬ್‌ಗೆ ಸಂಪರ್ಕ ಕಲ್ಪಿಸುವ ದಾರಿ ಅತ್ಯಂತ ಕಿರಿದಾಗಿದ್ದರಿಂದ ಅಗ್ನಿಶಾಮಕ ವಾಹನಗಳನ್ನು ಘಟನಾ ಸ್ಥಳದಿಂದ 400 ಮೀಟರ್ ದೂರದಲ್ಲೇ ನಿಲ್ಲಿಸಬೇಕಾಯಿತು. ಇದು ರಕ್ಷಣಾ ಕಾರ್ಯಾಚರಣೆ ವಿಳಂಬವಾಗಲು ಮತ್ತು ಸಾವು-ನೋವು ಹೆಚ್ಚಾಗಲು ಕಾರಣವಾಯಿತು.
ಉಸಿರುಗಟ್ಟಿ ಪ್ರಾಣಬಿಟ್ಟರು
ಆರಂಭದಲ್ಲಿ ಕ್ಲಬ್‌ನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಕ್ಲಬ್‌ನ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಕಿರಿದಾಗಿದ್ದರಿಂದ ನೂಕುನುಗ್ಗಲು ಉಂಟಾಯಿತು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರು ಮತ್ತು ಸಿಬ್ಬಂದಿ ಕೆಳಮಹಡಿಯಲ್ಲಿದ್ದ ಅಡುಗೆಮನೆಗೆ ಓಡಿಹೋಗಿ ಅಲ್ಲೇ ಸಿಕ್ಕಿಹಾಕಿಕೊಂಡರು. ಸರಿಯಾದ ಗಾಳಿ ಬೆಳಕಿಲ್ಲದೆ ಹೊಗೆ ತುಂಬಿಕೊಂಡು ಬಹುತೇಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ನಿಯಮ ಉಲ್ಲಂಘನೆ ಆರೋಪ
ಕ್ಲಬ್ ನಿರ್ಮಾಣಕ್ಕೆ ಸರಿಯಾದ ಅನುಮತಿ ಇರಲಿಲ್ಲ ಮತ್ತು ಅಗ್ನಿ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆಯೇ ಕ್ಲಬ್ ಕೆಡವಲು ನೋಟಿಸ್ ನೀಡಲಾಗಿತ್ತಾದರೂ, ಅಧಿಕಾರಿಗಳು ಅದಕ್ಕೆ ತಡೆ ನೀಡಿದ್ದರು. ಘಟನೆಗೆ ಸಂಬಂಧಿಸಿದಂತೆ ಮ್ಯಾನೇಜರ್‌ನನ್ನು ಬಂಧಿಸಲಾಗಿದ್ದು, ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿದ್ದಾರೆ.
ಪರಿಹಾರ ಘೋಷಣೆ
ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: ಹವಾಯಿಯಲ್ಲಿ ಡೆಡ್ಲಿ ಜ್ವಾಲಾಮುಖಿ | 20 ಸೆಕೆಂಡ್‌ನಲ್ಲಿ ಸಾವಿರ ಅಡಿ ಎತ್ತರಕ್ಕೆ ಚಿಮ್ಮಿದ ಲಾವ



















