ಮುಂಬೈ/ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ರದ್ದುಗೊಂಡ ವಿಮಾನಗಳಿಂದ ಕಂಗಾಲಾದ ಪ್ರಯಾಣಿಕರ ಆಕ್ರೋಶ ಮುಂಬೈ ವಿಮಾನ ನಿಲ್ದಾಣದಲ್ಲಿ ಕಟ್ಟೆಯೊಡೆದಿದೆ. ತನ್ನ ವಿಮಾನ ರದ್ದಾದ ವಿಷಯ ತಿಳಿದ ವಿದೇಶಿ ಮಹಿಳೆಯೊಬ್ಬರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ಬರಿಗಾಲಿನಲ್ಲಿ ಕೌಂಟರ್ ಏರಿ ಕುಳಿತು ಹೈಡ್ರಾಮಾ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ.
ಮುಂಬೈ ನಿಲ್ದಾಣದಲ್ಲಿ ಪ್ರಯಾಣಿಕರ ಆಕ್ರೋಶ
ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ, ವಿದೇಶಿ ಮಹಿಳೆಯೊಬ್ಬರು ಇಂಡಿಗೋ ಸಿಬ್ಬಂದಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ವಿಮಾನ ರದ್ದತಿಯಿಂದಾಗಿ ಸಾವಿರಾರು ಪ್ರಯಾಣಿಕರು ಅತಂತ್ರರಾಗಿದ್ದು, ಈ ಮಹಿಳೆ ಕೂಡ ಸಂತ್ರಸ್ತರಲ್ಲಿ ಒಬ್ಬರಾಗಿದ್ದರು. ಇಂಡಿಗೋ ಸಿಬ್ಬಂದಿಯ ಉತ್ತರದಿಂದ ತೃಪ್ತರಾಗದ ಆಕೆ, ಏಕಾಏಕಿ ಕೌಂಟರ್‌ನ ಕಿಟಕಿಯನ್ನು ಹಿಡಿದು ಮೇಲೆ ಹತ್ತಿ ಕುಳಿತರು.

ತನ್ನ ಬಟ್ಟೆಬರೆಗಳೆಲ್ಲವೂ ಚೆಕ್-ಇನ್ ಲಗೇಜ್‌ನಲ್ಲಿರುವುದರಿಂದ ಬಟ್ಟೆ ಬದಲಾಯಿಸಲೂ ಬಟ್ಟೆ ಇಲ್ಲದಂತಾಗಿದೆ ಎಂದು ಆಕೆ ಅಳಲು ತೋಡಿಕೊಂಡರು. ಅಲ್ಲದೆ, ತಕ್ಷಣವೇ ತಮಗೆ ಆಹಾರ ಒದಗಿಸಬೇಕು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಸಿಬ್ಬಂದಿ ಆಕೆಯನ್ನು ಸಮಾಧಾನಪಡಿಸಿ ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು.
ಪ್ರಯಾಣಿಕರ ಗೋಳು ಹೇಳತೀರದು
ಮುಂಬೈ ಮಾತ್ರವಲ್ಲದೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಂತಹದೇ ದೃಶ್ಯಗಳು ಕಂಡುಬಂದಿವೆ. ಮುಂಬೈನಲ್ಲಿ ರಾಯ್ಪುರಕ್ಕೆ ತೆರಳಬೇಕಿದ್ದ ಒಂದೇ ಕುಟುಂಬದ ಎಂಟು ಮಂದಿ ವಿಮಾನ ರದ್ದತಿಯಿಂದಾಗಿ ಅತಂತ್ರರಾಗಿದ್ದಾರೆ. ಗೇಟ್ ಬಳಿ ಬಂದಾಗ ವಿಮಾನ ರದ್ದಾಗಿದೆ ಎಂದು ಹೇಳಲಾಯಿತು, ಮುಂದೇನು ಮಾಡಬೇಕೆಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಇತ್ತ ಅಹಮದಾಬಾದ್ನಲ್ಲಿ, ಗುವಾಹಟಿಯಲ್ಲಿ ನಡೆಯಲಿರುವ ಹ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಬೇಕಿದ್ದ ತಂಡವೊಂದು ಕಣ್ಣೀರು ಹಾಕಿದೆ. ವಿಮಾನ ವಿಳಂಬದಿಂದಾಗಿ ಏಳು ತಿಂಗಳ ತಮ್ಮ ಶ್ರಮ ವ್ಯರ್ಥವಾಯಿತು, ಇಂತಹ ಅವಕಾಶಗಳು ಅಪರೂಪಕ್ಕೆ ಸಿಗುತ್ತವೆ ಎಂದು ವಿದ್ಯಾರ್ಥಿನಿಯೊಬ್ಬರು ನೋವು ಹಂಚಿಕೊಂಡರು.
ಬಿಕ್ಕಟ್ಟಿಗೆ ಕಾರಣವೇನು?
ಪೈಲಟ್ಗಳು ಮತ್ತು ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆ ಮಾಡಲು ಜಾರಿಗೊಳಿಸಲಾದ ಹೊಸ ‘ವಿಮಾನ ಹಾರಾಟ ಕರ್ತವ್ಯದ ಸಮಯ ಮಿತಿ’ (FDTL) ನಿಯಮಗಳೇ ಈ ಅವಾಂತರಕ್ಕೆ ಪ್ರಮುಖ ಕಾರಣವಾಗಿವೆ. ಹೊಸ ನಿಯಮಗಳ ಪ್ರಕಾರ ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ನೀಡಬೇಕಿರುವುದರಿಂದ, ಇಂಡಿಗೋ ಸಂಸ್ಥೆಗೆ ಅಗತ್ಯವಿರುವಷ್ಟು ಪೈಲಟ್‌ಗಳ ಕೊರತೆ ಎದುರಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಹೊಸ ಎಫ್ಡಿಟಿಎಲ್ ನಿಯಮಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದ್ದು, ಮೂರು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ನೀವು ರೈಲಿನಲ್ಲಿ ಲಗೇಜ್ ಮರೆತರೆ ಅದನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಮಾಹಿತಿ


















