ಮುಂಬೈ: 90ರ ದಶಕದ ಭಾರತೀಯ ರಸ್ತೆಗಳ ರಾಜ ಎಂದೇ ಖ್ಯಾತವಾಗಿದ್ದ ಐಕಾನಿಕ್ ಎಸ್‌ಯುವಿ ‘ಟಾಟಾ ಸಿಯೆರಾ’ (Tata Sierra) ಮತ್ತೆ ರಸ್ತೆಗಳಲ್ಲಿ ಘರ್ಜಿಸಲು ಸಜ್ಜಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ 5-ಸೀಟರ್ ಮಾದರಿಯ ಯಶಸ್ಸಿನ ಬೆನ್ನಲ್ಲೇ, ಟಾಟಾ ಮೋಟರ್ಸ್ (Tata Motors) ಈ ಬ್ರಾಂಡ್ ಅನ್ನು ಮತ್ತಷ್ಟು ವಿಸ್ತರಿಸಲು ಬೃಹತ್ ಯೋಜನೆ ರೂಪಿಸಿದೆ. ಕೇವಲ ಪೆಟ್ರೋಲ್-ಡೀಸೆಲ್ ಅಷ್ಟೇ ಅಲ್ಲ, 7-ಸೀಟರ್, ಆಲ್-ವೀಲ್ ಡ್ರೈವ್ (AWD) ಮತ್ತು ಸಿಎನ್‌ಜಿ (CNG) ಆವೃತ್ತಿಗಳಲ್ಲೂ ಸಿಯೆರಾವನ್ನು ಪರಿಚಯಿಸಲು ಕಂಪನಿ ಸಿದ್ಧತೆ ನಡೆಸಿದೆ.
ಕುಟುಂಬ ಸಮೇತ ‘ಲಾಂಗ್ ಡ್ರೈವ್’ಗೆ 7-ಸೀಟರ್ ಸಿಯೆರಾ
ಸದ್ಯ ಮಾರುಕಟ್ಟೆಯಲ್ಲಿರುವ 5-ಸೀಟರ್ ಸಿಯೆರಾ, ಟಾಟಾ ಕರ್ವ್ (Curvv) ಮತ್ತು ಹ್ಯಾರಿಯರ್ (Harrier) ನಡುವಿನ ಸ್ಥಾನವನ್ನು ತುಂಬಿದೆ. ಆದರೆ, ದೊಡ್ಡ ಕುಟುಂಬಗಳ ಬೇಡಿಕೆ ಪೂರೈಸಲು ಟಾಟಾ ಈಗ 7-ಸೀಟರ್ ಆವೃತ್ತಿಯತ್ತ ಚಿತ್ತ ಹರಿಸಿದೆ. ಸಿಯೆರಾದ ಉದ್ದನೆಯ ವೀಲ್‌ಬೇಸ್ ಮತ್ತು ಮಾಡ್ಯುಲರ್ ವಿನ್ಯಾಸವು 3ನೇ ಸಾಲಿನ ಆಸನಗಳನ್ನು ಅಳವಡಿಸಲು ಹೇಳಿಮಾಡಿಸಿದ ಹಾಗಿದೆ. ಇದು ಪ್ರಸ್ತುತ ಸಿಯೆರಾ ಮತ್ತು ಪೂರ್ಣ ಪ್ರಮಾಣದ ಡಿ-ಸೆಗ್ಮೆಂಟ್ ಎಸ್‌ಯುವಿಗಳ (ಸಫಾರಿ) ನಡುವೆ ಸ್ಥಾನ ಪಡೆಯುವ ಸಾಧ್ಯತೆಯಿದೆ. ಬೆಲೆಯ ವಿಚಾರದಲ್ಲಿ, ಆರಂಭಿಕ ಬೆಲೆ 11.49 ಲಕ್ಷ ರೂ. (ಎಕ್ಸ್-ಶೋರೂಂ) ಇರುವ 5-ಸೀಟರ್‌ಗಿಂತ ಇದು ತುಸು ಹೆಚ್ಚಿರಲಿದೆ.

ಆಫ್-ರೋಡ್ ಪ್ರಿಯರಿಗೆ 4×4 (AWD) ಕಿಕ್
ಕೇವಲ ನಗರ ಸಂಚಾರಕ್ಕಷ್ಟೇ ಅಲ್ಲ, ಸಾಹಸ ಪ್ರಿಯರಿಗೂ ಸಿಯೆರಾ ಇಷ್ಟವಾಗಬೇಕು ಎಂಬುದು ಟಾಟಾ ಪ್ಲಾನ್. ಈ ನಿಟ್ಟಿನಲ್ಲಿ ಆಲ್-ವೀಲ್ ಡ್ರೈವ್ (AWD) ಆಯ್ಕೆಯನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. 2026ರ ಆರಂಭದಲ್ಲಿ ಬಿಡುಗಡೆಯಾಗಲಿರುವ ‘ಸಿಯೆರಾ ಇವಿ’ (Sierra EV) ಮಾದರಿಯಲ್ಲಿ ಮೊದಲು AWD ಲಭ್ಯವಾಗಲಿದೆ. ನಂತರ 2027ರ ವೇಳೆಗೆ ಪೆಟ್ರೋಲ್/ಡೀಸೆಲ್ ಎಂಜಿನ್ ಮಾದರಿಯಲ್ಲೂ AWD ಬರುವ ನಿರೀಕ್ಷೆಯಿದೆ. ಹ್ಯಾರಿಯರ್ ಇವಿ ಮಾದರಿಯಲ್ಲೇ ಡ್ಯುಯಲ್ ಮೋಟಾರ್ ಸೆಟಪ್ ಇದರಲ್ಲಿರಬಹುದು.
ಜೇಬಿಗೆ ಕತ್ತರಿ ಬೀಳದಂತೆ ‘ಸಿಎನ್‌ಜಿ’ ಆಯ್ಕೆ
ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಆಯ್ಕೆಗಳನ್ನು ಬಯಸುವವರಿಗಾಗಿ ಟಾಟಾ, ಸಿಯೆರಾದ ಸಿಎನ್‌ಜಿ (CNG) ಆವೃತ್ತಿಯನ್ನೂ ಪರಿಗಣಿಸುತ್ತಿದೆ. ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಸಿಎನ್‌ಜಿ ಬೇಡಿಕೆ ಹೆಚ್ಚುತ್ತಿರುವುದರಿಂದ, ಇದೊಂದು ಪ್ರಾಯೋಗಿಕ ಮತ್ತು ಬಜೆಟ್ ಸ್ನೇಹಿ ಆಯ್ಕೆಯಾಗಲಿದೆ.

ARGOS: ಟಾಟಾದ ಹೊಸ ಬ್ರಹ್ಮಾಸ್ತ್ರ
ಈ ಎಲ್ಲಾ ಹೊಸ ಅವತಾರಗಳ ಹಿಂದೆ ಇರುವುದು ಟಾಟಾದ ಅತ್ಯಾಧುನಿಕ ‘ARGOS’ ಪ್ಲಾಟ್‌ಫಾರ್ಮ್ (All-terrain Ready, Omni-Energy, and Geometry Scalable Architecture). ಇದೊಂದು ಫ್ಲೆಕ್ಸಿಬಲ್ (ಹೊಂದಿಕೊಳ್ಳುವ) ಆರ್ಕಿಟೆಕ್ಚರ್ ಆಗಿದ್ದು, ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ – ಹೀಗೆ ಎಲ್ಲ ಬಗೆಯ ಎಂಜಿನ್‌ಗಳನ್ನು ಇದು ಬೆಂಬಲಿಸುತ್ತದೆ. ಕನಿಷ್ಠ ಬದಲಾವಣೆಗಳೊಂದಿಗೆ ಹೊಸ ವೆರಿಯಂಟ್‌ಗಳನ್ನು ಪರಿಚಯಿಸಲು ಇದು ಕಂಪನಿಗೆ ನೆರವಾಗಲಿದೆ. ಅಂದರೆ, 5-ಸೀಟರ್‌ನಿಂದ 7-ಸೀಟರ್‌ಗೆ ಅಥವಾ ಎಲೆಕ್ಟ್ರಿಕ್‌ಗೆ ಬದಲಾಗಲು ಇಡೀ ವಿನ್ಯಾಸವನ್ನು ಬದಲಿಸುವ ಅಗತ್ಯವಿಲ್ಲ.
ಪವರ್‌ಫುಲ್ ಎಂಜಿನ್ ಆಯ್ಕೆಗಳು
ಹೊಸ ಸಿಯೆರಾ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ:
- 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (106 bhp, 145 Nm).
- ಹೊಸ 1.5 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 bhp, 255 Nm).
- 1.5 ಲೀಟರ್ ಡೀಸೆಲ್ ಎಂಜಿನ್ (118 bhp, 260/280 Nm).
ಇದನ್ನೂ ಓದಿ: NO SIM, NO CHAT : ವಾಟ್ಸ್‌ಆ್ಯಪ್, ಟೆಲಿಗ್ರಾಮ್‌ಗೆ ಕೇಂದ್ರದ ಹೊಸ ‘ಡಿಜಿಟಲ್ ಲಾಕ್’!


















