ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಭಾನುವಾರ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದ್ದು, ತಂಡದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ನವೆಂಬರ್ 30ರಿಂದ ರಾಂಚಿಯಲ್ಲಿ ಈ ಸರಣಿ ಆರಂಭವಾಗಲಿದೆ.
ರಾಹುಲ್‌ಗೆ ಒಲಿದ ನಾಯಕತ್ವ, ಗಿಲ್‌ಗೆ ವಿಶ್ರಾಂತಿ
ಟೀಂ ಇಂಡಿಯಾದ ನಿಯಮಿತ ನಾಯಕ ಶುಭಮನ್ ಗಿಲ್ ಅವರು ಕುತ್ತಿಗೆಯ ಭಾಗದ ನೋವಿನಿಂದ ಬಳಲುತ್ತಿದ್ದು, ವೈದ್ಯರ ಸಲಹೆಯ ಮೇರೆಗೆ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಕೋಲ್ಕತ್ತಾದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಗಿಲ್ ಅವರು ಗಾಯಗೊಂಡಿದ್ದರು. ರೋಹಿತ್ ಶರ್ಮಾ ತಂಡಕ್ಕೆ ಲಭ್ಯವಿದ್ದರೂ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕೆ.ಎಲ್ ರಾಹುಲ್ ಅವರಿಗೆ ನಾಯಕತ್ವ ನೀಡಲು ನಿರ್ಧರಿಸಿದೆ. ರಾಹುಲ್ ಅವರು 2022 ಮತ್ತು 2023ರ ಅವಧಿಯಲ್ಲಿ 12 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.
ರುತುರಾಜ್, ತಿಲಕ್ ವರ್ಮಾ ಪುನರಾಗಮನ
ಗಾಯಾಳುಗಳಾದ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ, ಯುವ ಬ್ಯಾಟರ್‌ಗಳಾದ ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇವರಿಬ್ಬರೂ ಇತ್ತೀಚೆಗೆ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ನಡೆದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ರಾಜ್‌ಕೋಟ್‌ನಲ್ಲಿ ನಡೆದ ಸರಣಿಯಲ್ಲಿ ರುತುರಾಜ್ ಶತಕ ಸಿಡಿಸಿ ಮಿಂಚಿದ್ದರೆ, ತಿಲಕ್ ವರ್ಮಾ ಆಲ್ ರೌಂಡ್ ಆಟ ಪ್ರದರ್ಶಿಸಿದ್ದರು. ಇದೇ ವೇಳೆ, ಹಿರಿಯ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಅಕ್ಷರ್ ಪಟೇಲ್ ಬದಲಿಗೆ ತಂಡಕ್ಕೆ ಮರಳಿದ್ದಾರೆ.
ಶ್ರೇಯಸ್ ಅಯ್ಯರ್‌ಗೆ ಗಂಭೀರ ಗಾಯ, ಬುಮ್ರಾಗೆ ರೆಸ್ಟ್
ತಂಡದ ಉಪನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರು ಸಿಡ್ನಿಯಲ್ಲಿ ಫೀಲ್ಡಿಂಗ್ ಮಾಡುವಾಗ ಪಕ್ಕೆಲುಬಿನ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕನಿಷ್ಠ ಎರಡು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಇನ್ನು ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಕೆಲಸದ ಒತ್ತಡ ನಿರ್ವಹಣೆ (Workload Management) ದೃಷ್ಟಿಯಿಂದ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ ಅವರ ಚೇತರಿಕೆ ಇನ್ನೂ ಪೂರ್ಣಗೊಳ್ಳದ ಕಾರಣ ಅವರ ಆಯ್ಕೆಯನ್ನು ಮುಂದೂಡಲಾಗಿದ್ದು, ಟಿ20 ಸರಣಿಗೆ ಅವರು ಲಭ್ಯವಾಗುವ ಸಾಧ್ಯತೆಯಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ಅವರಂತಹ ಯುವ ಬೌಲರ್‌ಗಳಿಗೆ ಮಣೆ ಹಾಕಲಾಗಿದೆ.
ಪಂದ್ಯದ ವೇಳಾಪಟ್ಟಿ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವು ನವೆಂಬರ್ 30ರಂದು ರಾಂಚಿಯಲ್ಲಿ ನಡೆಯಲಿದೆ. ನಂತರದ ಎರಡು ಪಂದ್ಯಗಳು ಡಿಸೆಂಬರ್ 3 ಮತ್ತು 6 ರಂದು ಕ್ರಮವಾಗಿ ರಾಯಪುರ ಮತ್ತು ವಿಶಾಖಪಟ್ಟಣಂನಲ್ಲಿ ಜರುಗಲಿವೆ. ಏಕದಿನ ಸರಣಿಯ ಬಳಿಕ ಡಿಸೆಂಬರ್ 9 ರಿಂದ 19ರ ವರೆಗೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಭಾರತ ತಂಡದ ವಿವರ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆ.ಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.
ಇದನ್ನೂ ಓದಿ: ಸ್ಮೃತಿ ಮಂಧಾನಾ ತಂದೆಗೆ ಹೃದಯಾಘಾತ | ಇಂದು ನಡೆಬೇಕಿದ್ದ ವಿವಾಹ ಮುಂದೂಡಿಕೆ..!



















