ಮೈಸೂರು : ಜಿಲ್ಲೆ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾದ ರಾಜಶೇಖರ ಅವರ ಜಮೀನಿನ ಸಮೀಪವೇ ಮತ್ತೆ ಹುಲಿ ದಾಳಿ ಮಾಡಿ, ರೈತನ ಮುಂದೆಯೇ ಹಸುವನ್ನು ಬೇಟೆಯಾಡಿದೆ. ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸರಗೂರು ಮತ್ತು ಹೆಚ್.ಡಿ.ಕೋಟೆ ತಾಲೂಕುಗಳಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿವೆ. ಕಳೆದ ಒಂದು ತಿಂಗಳಲ್ಲಿ ಹುಲಿ ದಾಳಿಗೆ ಮೂವರು ಬಲಿಯಾದರೆ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಈ ಘಟನೆಗಳು ಮಾಸುವ ಮುನ್ನವೇ ಸರಗೂರು ತಾಲೂಕು ಬೆಣ್ಣೆಗೆರೆಯಲ್ಲಿ ಹುಲಿ ದಾಳಿ ನಡೆದಿದೆ. ರೈತ ಜಯಪ್ಪನವರಿಗೆ ಸೇರಿದ ಹಸುವನ್ನು ಸಾಯಿಸಿದೆ. ಸ್ವಲ್ಪದರಲ್ಲೇ ರೈತ ಅಪಾಯದಿಂದ ಪಾರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದನ ಹುಲಿಯ ಉಪಟಳ ಹೆಚ್ಚಾಗಿರುವುದರಿಂದ ಗ್ರಾಮದ ಕಾಡಂಚಿನ ಭಾಗದ ಜನರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗುತ್ತಿದೆ. ರಾತ್ರಿಯ ವೇಳೆ ಓಡಾಡದಂತೆ ತಿಳಿಸಲಾಗುತ್ತಿದೆ. ನಂಜನಗೂಡಿನ ಮಲ್ಲುಂಡಿಯ ಗ್ರಾಮದ ಜಮೀನಿನಲ್ಲಿ ಹಾಡಹಗಲೇ ಹುಲಿ ದಾಳಿ ಮಾಡಿ ಹಸುವೊಂದನ್ನು ಕೊಂದು ಹಾಕಿರುವ ಘಟನೆ ಸಮೀಪದ ಯಾಲೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ : ಕೈನಾಯಕರು ತಮ್ಮ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಹೋಗ್ತಿದ್ದಾರೆ | ಅಶೋಕ್ ವಾಗ್ದಾಳಿ



















