ಬೆಂಗಳೂರು: ಭಾರತೀಯ ಅಂಚೆಯು ಇತ್ತೀಚೆಗೆ ಆಧುನಿಕ ಜಗತ್ತಿಗೆ ತೆರೆದುಕೊಳ್ಳುತ್ತಿದೆ. ಅದರಲ್ಲೂ ಡಿಜಿಟಲ್ ಯುಗಕ್ಕೆ ನಿಧಾನವಾಗಿ ಒಗ್ಗಿಕೊಳ್ಳುತ್ತಿದೆ. ಹಲವು ಬದಲಾವಣೆಗಳನ್ನು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಈಗ ಅಂಚೆ ಇಲಾಖೆಯು ಡಾಕ್ ಸೇವಾ ಎಂಬ ಆ್ಯಪ್ ಬಿಡುಗಡೆ ಮಾಡಿದ್ದು, ಮೊಬೈಲ್ ನಲ್ಲಿಯೇ ಅಂಚೆ ಇಲಾಖೆಯ 8 ಪ್ರಮುಖ ಸೇವೆಗಳನ್ನು ಪಡೆಯಬಹುದಾಗಿದೆ. ಇದರಿಂದ ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗಲಿದೆ.
ನೀವು ಮಾಡಿದ ಪಾರ್ಸೆಲ್ ಗಳನ್ನು ಟ್ರ್ಯಾಕ್ ಮಾಡುವುದು, ಪೋಸ್ಟೇಜ್ ಲೆಕ್ಕಾಚಾರ, ವಿಮಾ ಪ್ರೀಮಿಯಂ ಪಾವತಿ, ಯಾವುದೇ ಸೇವೆಗಳಲ್ಲಿ ವ್ಯತ್ಯಯವಾದರೆ ದೂರು ಸಲ್ಲಿಸುವುದು ಸೇರಿ ಹಲವು ಸೇವೆಗಳನ್ನು ಪಡೆಯಬಹುದು. ಅದರಲ್ಲೂ, ಇದೇ ಆ್ಯಪ್ ಮೂಲಕ ಸ್ಪೀಡ್ ಪೋಸ್ಟ್, ಮನಿ ಆರ್ಡರ್ ಸ್ಥಿತಿಯನ್ನು ರಿಯಲ್ ಟೈಮ್ ನಲ್ಲಿ ಟ್ರ್ಯಾಕ್ ಮಾಡಬಹುದು. ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾರ್ಸೆಲ್ ಸೇವೆಗಳಿಗೆ ಎಷ್ಟು ಶುಲ್ಕಗಳು ಇವೆ ಎಂಬುದನ್ನು ಕೂಡ ಇದೇ ಆ್ಯಪ್ ಮೂಲಕ ಲೆಕ್ಕವನ್ನು ಮಾಡಬಹುದಾಗಿದೆ.
ಗ್ರಾಹಕರಿಗೆ ಅಂಚೆ ಕಚೇರಿಯ ಆ್ಯಪ್ ನಲ್ಲಿ ರಿಜಿಸ್ಟರ್ಡ್ ಪೋಸ್ಟ್, ಸ್ಪೀಡ್ ಪೋಸ್ಟ್, ಪಾರ್ಸೆಲ್ ಬುಕಿಂಗ್ ನಂತಹ ಸೇವೆಗಳನ್ನು ಕೂಡ ಪಡೆಯಬಹುದು. ಇದರಿಂದ ಅಂಚೆ ಕಚೇರಿಗಳಲ್ಲಿ ಕ್ಯೂ ನಿಲ್ಲುವ ಕೆಲಸ ತಪ್ಪುತ್ತದೆ. ಜಿಪಿಎಸ್ ಆಧಾರದ ಮೇಲೆ ಹತ್ತಿರದ ಪೋಸ್ಟ್ ಆಫೀಸ್ ವಿವರಗಳನ್ನೂ ಪಡೆಯಬಹುದಾಗಿದೆ.
ಆಂಡ್ರಾಯ್ಡ್ ಬಳಕೆದಾರರು ಗ್ರಾಹಕರು ಡಾಕ್ ಸೇವಾ ಆ್ಯಪ್ ಅನ್ನುಗೂಗಲ್ ಪ್ಲೇ ಸ್ಟೋರ್ ನಿಂದ ಮತ್ತು ಆ್ಯಪಲ್ ಐಫೋನ್ ಬಳಕೆದಾರರು ಆ್ಯಪಲ್ ಆ್ಯಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. Dak Sewa App ಎಂದು ಟೈಪ್ ಮಾಡಿದರೆ Department of Posts, Government of India ಹೆಸರಿನಲ್ಲಿರುವ ಅಧಿಕೃತ ಆ್ಯಪ್ ಡಿಸ್ ಪ್ಲೇ ಆಗುತ್ತದೆ. ಅದನ್ನು ಇನ್ ಸ್ಟಾಲ್ ಮಾಡಿಕೊಂಡರೆ ಸಾಕು, ಅಂಗೈಯಲ್ಲೇ ಹಲವು ಸೇವೆಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ BEMLನಲ್ಲಿ 100 ಹುದ್ದೆಗಳ ನೇಮಕಾತಿ: 43 ಸಾವಿರ ರೂ. ಸಂಬಳ



















