ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಸಂಸ್ಥೆಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸಂಸ್ಥೆಗೆ ಸೇರಿದ ಮುಂಬೈನ ಪಾಲಿ ಹಿಲ್‌ನಲ್ಲಿರುವ ಐಷಾರಾಮಿ ನಿವಾಸ, ದೆಹಲಿಯ ರಿಲಯನ್ಸ್ ಸೆಂಟರ್ ಸೇರಿದಂತೆ ಸುಮಾರು 3,084 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಅಕ್ಟೋಬರ್ 31 ರಂದು ಹೊರಡಿಸಲಾದ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ದೆಹಲಿ, ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ ಮತ್ತು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗಳಲ್ಲಿರುವ ವಸತಿ ಸಮುಚ್ಚಯಗಳು, ಕಚೇರಿ ಕಟ್ಟಡಗಳು ಮತ್ತು ಜಮೀನುಗಳನ್ನು ಜಪ್ತಿ ಮಾಡಲಾಗಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್ಎಫ್ಎಲ್) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (ಆರ್‌ಸಿಎಫ್ಎಲ್) ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಬೇರೆಡೆಗೆ ವರ್ಗಾಯಿಸಿ, ಅಕ್ರಮವಾಗಿ ಬಳಸಿಕೊಂಡಿವೆ ಎಂಬ ಆರೋಪದ ಮೇಲೆ ಈ ತನಿಖೆ ನಡೆಯುತ್ತಿದೆ ಎಂದು ಇಡಿ ತಿಳಿಸಿದೆ. 2017 ರಿಂದ 2019ರ ಅವಧಿಯಲ್ಲಿ, ಯೆಸ್ ಬ್ಯಾಂಕ್ ಆರ್‌ಎಚ್ಎಫ್ಎಲ್ ನಲ್ಲಿ 2,965 ಕೋಟಿ ರೂ. ಮತ್ತು ಆರ್‌ಸಿಎಫ್ಎಲ್ ನಲ್ಲಿ 2,045 ಕೋಟಿ ರೂ. ಹೂಡಿಕೆ ಮಾಡಿತ್ತು. ಆದರೆ ಡಿಸೆಂಬರ್ 2019ರ ವೇಳೆಗೆ ಈ ಹೂಡಿಕೆಗಳು ಅನುತ್ಪಾದಕ ಆಸ್ತಿಗಳಾಗಿ (NPA) ಮಾರ್ಪಟ್ಟಿದ್ದವು.
ರಿಲಯನ್ಸ್ ನಿಪ್ಪಾನ್ ಮ್ಯೂಚುಯಲ್ ಫಂಡ್, ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ನೇರವಾಗಿ ಅನಿಲ್ ಅಂಬಾನಿ ಸಮೂಹದ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದನ್ನು ಸೆಬಿ (SEBI) ನಿಯಮಗಳು ನಿರ್ಬಂಧಿಸುತ್ತವೆ. ಆದರೆ, ಈ ನಿಯಮವನ್ನು ಉಲ್ಲಂಘಿಸಿ, ಯೆಸ್ ಬ್ಯಾಂಕ್ ಮೂಲಕ ಪರೋಕ್ಷವಾಗಿ ಹಣವನ್ನು ಎರಡೂ ಸಂಸ್ಥೆಗಳಿಗೆವರ್ಗಾಯಿಸಿ, ಅಂತಿಮವಾಗಿ ಅನಿಲ್ ಅಂಬಾನಿ ಕಂಪನಿಗಳಿಗೆ ತಲುಪಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಸಾಲ ನೀಡುವಾಗ ಯಾವುದೇ ಸೂಕ್ತ ಪರಿಶೀಲನೆ ನಡೆಸಿಲ್ಲ, ಅರ್ಜಿ ಸಲ್ಲಿಸಿದ ದಿನವೇ ಸಾಲ ಮಂಜೂರು ಮಾಡಲಾಗಿದೆ, ಕೆಲವೊಮ್ಮೆ ಅರ್ಜಿ ಸಲ್ಲಿಸುವ ಮುನ್ನವೇ ಸಾಲ ನೀಡಲಾಗಿದೆ ಎಂಬ ಆಘಾತಕಾರಿ ಅಂಶಗಳನ್ನು ಇಡಿ ಪತ್ತೆಹಚ್ಚಿದೆ. ಭದ್ರತಾ ದಾಖಲೆಗಳೂ ಇರಲಿಲ್ಲ ಅಥವಾ ದಿನಾಂಕವನ್ನು ನಮೂದಿಸಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ, ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಸಾಲ ವಂಚನೆ ಪ್ರಕರಣದ ತನಿಖೆಯನ್ನು ಇ.ಡಿ. ಚುರುಕುಗೊಳಿಸಿದೆ. ಪ್ರಾಥಮಿಕ ತನಿಖೆಯಲ್ಲಿ 13,600 ಕೋಟಿ ರೂ.ಗೂ ಅಧಿಕ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದು, ಇದರಲ್ಲಿ 12,600 ಕೋಟಿ ರೂ.ಗಳನ್ನು ಸಂಬಂಧಿತ ಸಂಸ್ಥೆಗಳಿಗೆ ಮತ್ತು 1,800 ಕೋಟಿಯನ್ನು ಸ್ಥಿರ ಠೇವಣಿ ಹಾಗೂ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವುದು ಕಂಡುಬಂದಿದೆ.
ಸಾರ್ವಜನಿಕರ ಮತ್ತು ಹೂಡಿಕೆದಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ತನಿಖೆಯನ್ನು ಮುಂದುವರಿಸಲಾಗುವುದು ಮತ್ತು ಅಪರಾಧದಿಂದ ಗಳಿಸಿದ ಆಸ್ತಿಗಳನ್ನು ಪತ್ತೆಹಚ್ಚಿ ಜಪ್ತಿ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಇ.ಡಿ. ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ | ಡಿ-ಗ್ಯಾಂಗ್‌ಗೆ ಇಂದು ಬಿಗ್ ಡೇ..!



















