ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 50 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಅವರನ್ನು ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪಟಿಯಾಲ ಹೌಸ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲೂ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿತ್ತು. ಪ್ರತಿಷ್ಠಿತ ಸಂಸ್ಥೆ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ನಲ್ಲಿ ಒಟ್ಟು 32 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 16 ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅಶ್ಲೀಲ ವಾಟ್ಸಪ್ ಸಂದೇಶ ಕಳಿಸೋದು, ಅನಗತ್ಯ ಲೈಂಗಿಕ ಸಂಪರ್ಕ ನಡಿಸಿದ್ದಾಗಿ ದೂರಿನಲ್ಲಿ ಉಲ್ಲೇಖವಾಗಿತ್ತು. ಈ ಬಗ್ಗೆ ಪಟಿಯಾಲ ಹೌಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 16 ವಿದ್ಯಾರ್ಥಿನಿಯರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಾಗಿತ್ತು.
ಆರ್ಥಿಕವಾಗಿ ದುರ್ಬಲ ವರ್ಗಗಳ ವಿಭಾಗದಲ್ಲಿ ವಿದ್ಯಾರ್ಥಿವೇತನದೊಂದಿಗೆ ಸ್ನಾತಕೋತ್ತರ ನಿರ್ವಹಣಾ ಡಿಪ್ಲೊಮಾ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ, ವಿದೇಶ ಪ್ರವಾಸದ ಆಸೆ ತೋರಿಸಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಅದಕ್ಕೆ ಕಾಲೇಜಿನ ಪ್ರಾಧ್ಯಪಕರು, ಹಾಸ್ಟೆಲ್ ವಾರ್ಡನ್‌ಗಳು ಸಾಥ್ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು. ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿದ ನಂತರ ಹೊಸ ಎಫ್‌ಐಆರ್ ದಾಖಲಿಸಲಾಗಿತ್ತು.

















