ಕೊಲ್ಲೂರು : ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು, ಮೂಕಾಂಬಿಕೆ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಕೊಲ್ಲೂರು ಪಟ್ಟಣದಲ್ಲಿ ನೆಲೆಸಿರುವ ಕಾರಣ, ಈಕೆಯನ್ನು ಕೊಲ್ಲೂರು ಮೂಕಾಂಬಿಕೆ ಎಂದೇ ಭಕ್ತರು ಕರೆಯುತ್ತಾರೆ. ಈ ಆಲಯವು ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಪಾರ್ವತಿ ದೇವಿಯ ರೂಪಕ್ಕೆ ಸಮರ್ಪಿಸಲಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ತಾಯಿಯ ಕೃಪೆಗೆ ಪಾತ್ರರಾಗಲು ಭೇಟಿ ನೀಡುತ್ತಾರೆ. ಹಾಗೆ ದರ್ಶನಕ್ಕೆ ಬರುವ ಭಕ್ತರು ದೇವಾಲಯದ ಜೀರ್ಣೋದ್ಧಾರಕ್ಕೆ ಅಥವಾ ತಾಯಿಗಾಗಿ ಉಡುಗೊರೆಯನ್ನು ದೇಣಿಗೆ ರೂಪದಲ್ಲಿ ಅರ್ಪಿಸುತ್ತಾರೆ.
ಅದೇ ರೀತಿ ಭಾರತೀಯ ಸಂಗೀತ ಸಂಯೋಜಕ, ಗಾಯಕರಾಗಿ ಜನಪ್ರಿಯವಾಗಿರುವ ಇಳಯರಾಜಾ ಕೂಡ ಮೂಕಾಂಬಿಕೆಗೆ ವಜ್ರದ ಕಿರೀಟ ಮತ್ತು ಚಿನ್ನಾಭರಣಗಳು ಹಾಗೂ ದೇವಸ್ಥಾನದ ಒಳಾಂಗಣದಲ್ಲಿರುವ ವೀರಭದ್ರ ಸ್ವಾಮಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಅರ್ಪಿಸಿದ್ದಾರೆ. ಈ ಕಿರೀಟವು ಶ್ರೀಮಂತಿಕೆ, ಪವಿತ್ರತೆ, ಭಕ್ತಿಯ ಪ್ರತೀಕವಾಗಿದೆ. ಇದು ನಿಸ್ಸಂದೇಹವಾಗಿ ದೈವಿಕ ಹಾಗೂ ಅಲೌಕಿಕ ಭವ್ಯತೆಯನ್ನು ಹೆಚ್ಚಿಸುತ್ತದೆ.
ಇಳಯರಾಜ ಈ ಹಿಂದೆಯೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಬೆಲೆಬಾಳುವ ವಜ್ರದ ಕಿರೀಟ ಸೇರಿದಂತೆ ಹಲವು ವಸ್ತುಗಳನ್ನು ಕೊಡುಗೆಯಾಗಿ ನೀಡಿದ್ದರು. ದೇವಳದ ಅರ್ಚಕ ಶ್ರೀಧರ ಅಡಿಗ ಅವರ ನೇತೃತ್ವದಲ್ಲಿ ಸಮರ್ಪಣೆ ಕಾರ್ಯದ ಧಾರ್ಮಿಕ ವಿಧಿವಿಧಾನ ನಡೆಯಿತು. ವಜ್ರಕಿರೀಟ ಸಹಿತ ಆಭರಣಗಳನ್ನು ಕೊಲ್ಲೂರು ದೇವಳದ ಓಲಗಮಂಟದಿಂದ ವೈಭವದ ಮೆರವಣೆಗೆಯ ಮೂಲಕ ದೇಗುಲಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ಇಳಯರಾಜ್ ಕುಟುಂಬದವರನ್ನು ದೇಗುಲದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ದೇವಳದ ಸದಸ್ಯರು, ಅರ್ಚಕರು, ತಂತ್ರಿಗಳು ಕೆ.ನಿತ್ಯಾನಂದ ಅಡಿಗ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ,
ಸುಧಾ ಕೆ, ಯು. ರಾಜೇಶ್ ಕಾರಂತ, ಮಹಾಲಿಂಗ ನಾಯ್ಕ, ಸುರೇಂದ್ರ ಶೆಟ್ಟಿ, ರಘುರಾಮ ದೇವಾಡಿಗ, ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಶೆಟ್ಟಿ, ತಂತ್ರಿಗಳು, ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರು, ದೇವಳದ ಸಿಬ್ಬಂದಿ ವರ್ಗ ಮತ್ತು ಊರ ನಾಗರೀಕರು ಉಪಸ್ಥಿತರಿದ್ದರು.





















