ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ರೆಪೊ ದರವನ್ನು ಇಳಿಸಿದ ಕಾರಣ ಹಲವು ಬ್ಯಾಂಕುಗಳು ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿ ಖಾತೆ (ಎಫ್ ಡಿ)ಗಳ ಹೂಡಿಕೆ ಮೇಲಿನ ಬಡ್ಡಿಯನ್ನು ಇಳಿಸಿವೆ. ಹಾಗಾಗಿ, ಹೆಚ್ಚಿನ ಜನರೀಗ ಎಫ್ ಡಿಯಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿಲ್ಲ. ಆದರೆ, ಪೋಸ್ಟ್ ಆಫೀಸ್ ನಲ್ಲಿ ಎಫ್ ಡಿಗಿಂತಲೂ ಹೆಚ್ಚಿನ ಬಡ್ಡಿ ಆದಾಯವನ್ನು ನೀಡುವ ಯೋಜನೆ ಇದೇ. ಹೌದು, ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆ (Post Office MIS-ಎಂಐಎಸ್) ಯಲ್ಲಿ ಎಫ್ ಡಿಗಿಂತ ಹೆಚ್ಚಿನ ರಿಟರ್ನ್ಸ್ ಪಡೆಯಬಹುದಾಗಿದೆ.
ಹೌದು, ಪೋಸ್ಟ್ ಆಫೀಸ್ ನ ಎಂಐಎಸ್ ಯೋಜನೆಯು ಯೋಜನೆ ವಿಶೇಷವಾಗಿ ಸ್ಥಿರ ಆದಾಯ ಪಡೆಯಲು ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ವಾರ್ಷಿಕ 7.4% ಬಡ್ಡಿದರವನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ನೀವು ಕೇವಲ 1,000 ರೂ.ದಿಂದ ಹೂಡಿಕೆ ಪ್ರಾರಂಭಿಸಬಹುದು. ಒಂದೇ ಖಾತೆಗೆ ಗರಿಷ್ಠ ಹೂಡಿಕೆ 9 ಲಕ್ಷ ರೂ., ಜಂಟಿ ಖಾತೆಗೆ 15 ಲಕ್ಷ ರೂ. ತನಕ ಮಾಡಬಹುದು. ಈ ಖಾತೆ ತೆರೆಯಲು ಉಳಿತಾಯ ಖಾತೆ ಹೊಂದಿರುವುದು ಅವಶ್ಯಕವಾಗಿದೆ.
ಮಾಸಿಕ ಆದಾಯ ಯೋಜನೆಯ ಅವಧಿ ಐದವಾಗಿದೆ. ಈ ಅವಧಿ ಮುಗಿದ ನಂತರ, ನಿಮ್ಮ ಆರಂಭಿಕ ಹೂಡಿಕೆಯ ಸಂಪೂರ್ಣ ಮೊತ್ತವನ್ನು ನಿಮಗೆ ಹಿಂತಿರುಗಿಸಲಾಗುತ್ತದೆ. ಉದಾಹರಣೆಗೆ, ನೀವು ಒಂದು ಲಕ್ಷ ರೂಪಾಯಿಯನ್ನು ಖಾತೆಗೆ ಹೂಡಿಕೆ ಮಾಡಿದರೆ, ಪ್ರಸ್ತುತ ಬಡ್ಡಿದರದಲ್ಲಿ ಪ್ರತಿ ತಿಂಗಳು 633 ರೂ. ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ.
ಇದೇ ರೀತಿ ನೀವು 10 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, ಮಾಸಿಕ ನಿಮಗೆ 6,330 ರೂಪಾಯಿ ಬಡ್ಡಿ ರೂಪದಲ್ಲಿ ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ. ಇದು ಕೇಂದ್ರ ಸರ್ಕಾರ ಬೆಂಬಲಿತ ಯೋಜನೆಯಾಗಿರುವುದರಿಂದ ಹೆಚ್ಚು ಸುರಕ್ಷಿತವಾಗಿದೆ. ಹಾಗಾಗಿ, ಎಫ್ ಡಿ ಗಿಂತಲೂ ಹೆಚ್ಚು ಆದಾಯ ಪಡೆಯಬೇಕು ಎನ್ನುವವರು ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ.



















