ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ-ದೂರುದಾರ ವ್ಯಕ್ತಿ ಹೇಳಿದಂತೆ ಉತ್ಖನನ ಕಾರ್ಯ ಮಾಡುತ್ತಲೇ ಇರುವುದಕ್ಕೆ ಸಾಧ್ಯವಿಲ್ಲ. ವಿಶೇಷ ತನಿಖಾ ದಳದ ಅಧಿಕಾರಿಗಳು ಎಲ್ಲವನ್ನೂ ತೀರ್ಮಾನ ಮಾಡಲಿದ್ದಾರೆಂದು ರಾಜ್ಯ ಸರ್ಕಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಸ್ಥಿಪಂಜರದ ಅವಶೇಷಗಳಿಗಾಗಿ ಎಷ್ಟು ಸಮಯದವರೆಗೆ ಅಗೆಯಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ದೂರುಗಳ ಆಧಾರದ ಮೇಲೆ ಉತ್ಖನನ ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಒಂದು ಅಂತ್ಯವಿರಬೇಕೆಂದು ಹೇಳಿದ್ದಾರೆ.
ಈ ವಿಷಯವನ್ನು ಯಾರೂ ರಾಜಕೀಯಗೊಳಿಸಬಾರದು, ಧಾರ್ಮಿಕ ಬಣ್ಣ ನೀಡಬಾರದು. ಇದು ಕಾನೂನು ಸಮಸ್ಯೆಯಾಗಿದ್ದು, ದೂರು ಸ್ವೀಕರಿಸುವುದು ಮತ್ತು ಎಫ್‌ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ. ಪೊಲೀಸರು ಪ್ರಕರಣವನ್ನು ಮುಂದುವರಿಸುತ್ತಾರೆ. ಕಾನೂನು ನಿಬಂಧನೆಗಳ ಪ್ರಕಾರ ಬೇರೆ ರೀತಿಯಲ್ಲಿ ನಿರ್ಧರಿಸುತ್ತಾರೆಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಪ್ರತಿಭಟನೆ ನಡೆಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಅಧಿವೇಶನದಲ್ಲಿ ಹೇಳಿಕೆ ನೀಡುವುದಾಗಿ ಹೇಳಿದ್ದಾರೆ.
ಸತ್ಯವನ್ನು ತಿಳಿಯಲು, ತನಿಖೆಯನ್ನು ಪೂರ್ಣಗೊಳಿಸಲು ಎಸ್‌ಐಟಿಗೆ ಅವಕಾಶ ನೀಡಬೇಕು. ಸರ್ಕಾರ ಎಸ್‌ಐಟಿಗೆ ಯಾವುದೇ ನಿರ್ದೇಶನ ನೀಡಿಲ್ಲ. ತನಿಖೆಯ ಮೇಲೆ ಪ್ರಭಾವ ಬೀರಿಲ್ಲ. ಮಧ್ಯಂತರ ಅಥವಾ ಅಂತಿಮ ವರದಿಯನ್ನು ಮಂಡಿಸುವುದು ಎಸ್‌ಐಟಿಗೆ ಬಿಟ್ಟದ್ದು ಎಂದಿದ್ದಾರೆ.


















