ಮಂಗಳೂರು: ಧರ್ಮಸ್ಥಳದ ಸ್ನಾನಘಟ್ಟದ ಬಳಿ ಸಾಕ್ಷಿ ದೂರುದಾರ ಗುರುತಿಸಿದ 13ನೇ ಸ್ಥಳದಲ್ಲಿ ಜಿಪಿಆರ್ ಬಳಸಿ ಮಂಗಳವಾರ (ಆ.12) ಶೋಧ ಕಾರ್ಯ ನಡೆಸಿದರೂ ಕೂಡ ಯಾವುದೇ ಅಸ್ಥಿ ಅವಶೇಷಗಳು ಗೋಚರವಾಗಿಲ್ಲ. ದೂರುದಾರ ಗುರುತಿಸಿದ ಬಹುತೇಕ ಸ್ಥಳಗಳ ಪೈಕಿ ಎರಡು ಸ್ಥಳಗಳನ್ನು ಬಿಟ್ಟು ಉಳಿದ ಯಾವ ಸ್ಥಳದಲ್ಲಿಯೂ ಅಸ್ಥಿ ಅವಶೇಷಗಳು ಪತ್ತೆಯಾಗಿಲ್ಲ. ಇದೀಗ ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್ ಐಟಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಕೆಲವು ಸ್ಥಳಗಳಲ್ಲಿ ಹಿಟಾಚಿ ಬಳಸಿ ಉತ್ಖನನ ಕಾರ್ಯ ಮಾಡಿದಾಗಲೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಜು.28ರಿಂದ ಈವರೆಗೆ 16 ಸ್ಥಳಗಳನ್ನು ಸಾಕ್ಷಿ ದೂರುದಾರ ಗುರುತಿಸಿದ್ದಾನೆ. ಇಂದೂ (ಬುಧವಾರ, ಆ.13) ಶೋಧ ಕಾರ್ಯ ಮುಂದುವರಿದಿದೆ.
ಸಾಕ್ಷಿ ದೂರುದಾರ ಗುರುತಿಸಿದ ಸ್ಥಳಗಳಲ್ಲಿ ಅಸ್ಥಿ ಪತ್ತೆಯಾಗದ ಹಿನ್ನಲೆಯಲ್ಲಿ ಆತನನ್ನು ಎಸ್ ಐಟಿ ಮಂಪರು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತನಿಖೆಯ ಮುಂದುವರಿದ ಭಾಗವಾಗಿ ಆತನನ್ನು ಪರೀಕ್ಷೆಗೆ ಒಳಪಡಿಸುವುದು ಅಗತ್ಯವೆನ್ನಲಾಗಿದೆ.
ಜಿಪಿಆರ್ ನಲ್ಲಿ ಯಾವ ಅಸ್ಥಿ ಅವಶೇಷಗಳು ಪತ್ತೆಯಾಗದಿದ್ದರೂ ಉತ್ಖನನನ ಕಾರ್ಯಕ್ಕೆ ದೂರುದಾರ ಪಟ್ಟು ಹಿಡಿದಿದ್ದು, ವಿಚಾರಣೆ ವೇಳೆ ಹೇಳಿಕೆ ಕೊಟ್ಟ ಆಧಾರದಂತೆ ಉಳಿದ ಸ್ಥಳವನ್ನು ಉತ್ಖನನ ನಡೆಸಲು ಒತ್ತಾಯಿಸಿದ್ದಾನೆನ್ನಲಾಗಿದೆ.
“ತನಿಖೆ ಶೀಘ್ರವೇ ಅಂತ್ಯ ?”
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗುರುತಿಸಿರುವ 13ನೇ ಸ್ಥಳದಲ್ಲೂ ಅಸ್ಥಿ ಅವಶೇಷಗಳು ಪತ್ತೆಯಾಗದಿದ್ದರೇ, ಎಸ್ ಐಟಿ ಉತ್ಖನನ ಕಾರ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲಾ ಘಟನೆ ನಡುವೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ, ಅನುಚೇತ್ ಅವರು ವಿಧಾನಸೌಧದಲ್ಲಿ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಿ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಧರ್ಮಸ್ಥಳದ ಗ್ರಾಮದ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.



















