ಬೆಂಗಳೂರು: ನಿರಂತರವಾಗಿ ರಾಜ್ಯದ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ ಮಾದಕ ದ್ರವ್ಯಗಳ ಹಾವಳಿಯನ್ನು ನಿಗ್ರಹಿಸಲು ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರ ಮುಂದಾಗಿದ್ದು, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯನ್ನು ರಚನೆ ಮಾಡಿದೆ. ಹೊಸದಾಗಿ ರಚಿಸಲಾದ ಈ ಕಾರ್ಯಪಡೆಗೆ ಒಟ್ಟು 66 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಮುನ್ನಡೆಸುವ ಸಲುವಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹುದ್ದೆಯನ್ನು ಕೂಡ ರಚನೆ ಮಾಡಿದೆ.
ಆಗಸ್ಟ್ 1, 2025ರ ಸರ್ಕಾರಿ ಆದೇಶದ ಪ್ರಕಾರ, ಘಟಕ ನೇರವಾಗಿ ಪೊಲೀಸ್ ಮಹಾನಿರ್ದೇಶಕ (ಸೈಬರ್ ಕಮಾಂಡ್) ಪ್ರಣವ್ ಮೊಹಂತಿ ಅವರಿಗೆ ವರದಿ ಮಾಡುತ್ತದೆ. ಎಎನ್‌ಟಿಎಫ್ ಗಾಗಿ 10 ಹೊಸ ಹುದ್ದೆಗಳನ್ನು ರಚಿಸಲಾಗಿದ್ದು, ನಕ್ಸಲ್ ವಿರೋಧಿ ಪಡೆಯ 56 ಸಿಬ್ಬಂದಿಗಳನ್ನು ಈ ಕಾರ್ಯಪಡೆಗೆ ವರ್ಗಾವಣೆ ಮಾಡಲಾಗಿದೆ.
ಹೊಸದಾಗಿ ರಚಿಸಲಾದ ಈ ಕಾರ್ಯಪಡೆಯಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್‌ಗಳು (ಹೆಚ್ಚುವರಿ ಎಸ್‌ಪಿಗಳು) ಮತ್ತು ಉಪ ಪೊಲೀಸ್ ಸೂಪರಿಂಟೆಂಡೆಂಟ್ (ಡಿವೈ ಎಸ್ ಪಿ), ಒಬ್ಬ ಸಹಾಯಕ ಆಡಳಿತ ಅಧಿಕಾರಿ, ಸೂಪರಿಂಟೆಂಡೆಂಟ್‌ಗಳು, ಜೂನಿಯರ್ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಸ್ಟೆನೋಗ್ರಾಫರ್‌ಗಳು ಮತ್ತು ದಲಾಯತ್‌ಗಳು ಇರಲಿದ್ದಾರೆ.
ANF ನಿಂದ ವರ್ಗಾವಣೆಗೊಂಡ 56 ಸಿಬ್ಬಂದಿಗಳಲ್ಲಿ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳು, 20 ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು 30 ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ.
ರಾಜ್ಯಾದ್ಯಂತ ಮಾದಕವಸ್ತು ಕಳ್ಳಸಾಗಣೆ, ವಿತರಣೆ ಮತ್ತು ದುರುಪಯೋಗವನ್ನು ಹತ್ತಿಕ್ಕಲು ANTF ಅನ್ನು ಸಮರ್ಪಿತ ಮತ್ತು ವಿಶೇಷ ಪಡೆಯಾಗಿ ರಚಿಸಲಾಗಿದೆ. ಸಂಘಟಿತ ಮಾದಕವಸ್ತು ಜಾಲಗಳನ್ನು ಪತ್ತೆ ಮಾಡಲು ಜಿಲ್ಲೆಗಳು, ಕೇಂದ್ರ ಮತ್ತು ಗುಪ್ತಚರ ಘಟಕಗಳ ನಡುವಿನ ಸಮನ್ವಯವನ್ನು ಸುಧಾರಿಸುವ ಗುರಿಯನ್ನು ಈ ಕಾರ್ಯಪಡೆ ಹೊಂದಿದೆ ಎಂದು ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



















