ಉಡುಪಿ: ಕಾಪು ಮಾರ್ಗವಾಗಿ ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-66ರ ಉಚ್ಚಿಲ ಸರ್ವೀಸ್ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ತತ್‌ಕ್ಷಣವೇ ದುರಸ್ತಿಗೆ ಕ್ರಮ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.
ನಿರಂತರ ಮಳೆಯಿಂದಾಗಿ ರಸ್ತೆ ಜಲಾವೃತವಾಗಿದ್ದು, ಹಲವೆಡೆ ದೊಡ್ಡ ಗುಂಡಿಗಳು ಉಂಟಾಗಿವೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕೂಡಲೇ ತಾತ್ಕಾಲಿಕ ಕಾಮಗಾರಿ ನಡೆಸಲು ರಾಷ್ಟ್ರೀಯ ಹೆದ್ದಾರಿ ಮಂಗಳೂರು ಕಚೇರಿಯ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಸಂಸದರ ಪತ್ರಕ್ಕೆ ದೂರವಾಣಿಯಲ್ಲಿ ಮಾತನಾಡಿದ ಯೋಜನಾ ನಿರ್ದೇಶಕರು, ಇನ್ನೆರಡು ದಿನಗಳಲ್ಲಿ ಸರ್ವಿಸ್ ರಸ್ತೆಯ 1 ಕಿ.ಮೀ. ಹೊಂಡ ಬಿದ್ದ ಜಾಗವನ್ನು ದುರಸ್ತಿಪಡಿಸುವುದಾಗಿ ತಿಳಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.



















