ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಅನುಮೋದನಾ ರೇಟಿಂಗ್‌ನಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದು, ವಿಶ್ವದ ಅತ್ಯಂತ ವಿಶ್ವಾಸಾರ್ಹ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಮೆರಿಕ ಮೂಲದ ಬಿಸಿನೆಸ್ ಇಂಟೆಲಿಜೆನ್ಸ್ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ಜುಲೈ 4ರಿಂದ 10, 2025ರವರೆಗೆ ನಡೆಸಿದ ಇತ್ತೀಚಿನ ‘ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್’ ಸಮೀಕ್ಷೆಯಲ್ಲಿ, ಪ್ರಧಾನಿ ಮೋದಿ ಅವರು ಶೇಕಡಾ 75 ಅನುಮೋದನಾ ರೇಟಿಂಗ್ ಪಡೆಯುವ ಮೂಲಕ ಅಗ್ರಪಟ್ಟ ಅಲಂಕರಿಸಿದ್ದಾರೆ.
ಈ ಕುರಿತು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದು, “ಒಂದು ಶತಕೋಟಿಗೂ ಹೆಚ್ಚು ಭಾರತೀಯರಿಂದ ಪ್ರೀತಿಸಲ್ಪಟ್ಟ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರಿಂದ ಗೌರವಿಸಲ್ಪಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಅಪ್ರೂವಲ್ ಟ್ರ್ಯಾಕರ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರು ವಿಶ್ವದ ಅತ್ಯಂತ ಉನ್ನತ ರೇಟಿಂಗ್ ಮತ್ತು ವಿಶ್ವಾಸಾರ್ಹ ನಾಯಕ. ಬಲಿಷ್ಠ ನಾಯಕತ್ವ, ಜಾಗತಿಕ ಗೌರವ. ಭಾರತ ಸುರಕ್ಷಿತ ಕೈಗಳಲ್ಲಿದೆ,” ಎಂದು ಬರೆದುಕೊಂಡಿದ್ದಾರೆ.
ಜಾಗತಿಕ ನಾಯಕರ ರೇಟಿಂಗ್ ಪಟ್ಟಿ
ಈ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರು ಇತರ ಪ್ರಮುಖ ಜಾಗತಿಕ ನಾಯಕರನ್ನು ಹಿಂದಿಕ್ಕಿದ್ದಾರೆ. ಪಟ್ಟಿಯಲ್ಲಿ ಪ್ರಮುಖ ನಾಯಕರ ರೇಟಿಂಗ್ ಹೀಗಿದೆ:
ನರೇಂದ್ರ ಮೋದಿ (ಭಾರತ): ಶೇ.75
ಲೀ ಜೆ-ಮ್ಯುಂಗ್ (ದಕ್ಷಿಣ ಕೊರಿಯಾ): ಶೇ.59
ಜೆವಿಯರ್ ಮಿಲೈ (ಅರ್ಜೆಂಟೀನಾ): ಶೇ.57
ಮಾರ್ಕ್ ಕಾರ್ನಿ (ಕೆನಡಾ): ಶೇ.56
ಡೊನಾಲ್ಡ್ ಟ್ರಂಪ್ (ಅಮೆರಿಕ): ಶೇ.44 (8ನೇ ಸ್ಥಾನ)
ಈ ಫಲಿತಾಂಶವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರ ನಿರಂತರ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ವಿಶ್ವದ ಅತ್ಯಂತ ಅನುಮೋದಿತ ಜಾಗತಿಕ ನಾಯಕ ಎಂಬ ಅವರ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿದೆ. ಶೇ. 18ರಷ್ಟು ಮಂದಿ ಮೋದಿಯವರ ನಾಯಕತ್ವವನ್ನು ಅನುಮೋದಿಸಿಲ್ಲ, ಶೇ. 7ರಷ್ಟು ಮಂದಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸಮೀಕ್ಷೆ ತಿಳಿಸಿದೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2021ರಿಂದಲೂ ‘ಮಾರ್ನಿಂಗ್ ಕನ್ಸಲ್ಟ್’ ಸಂಸ್ಥೆಯ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್‌ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಸೆಪ್ಟೆಂಬರ್ 2021: ಶೇ. 70ರಷ್ಟು ಜನರಿಂದ ಅನುಮೋದನೆ.
2022ರ ಆರಂಭ: ಸುಮಾರು ಶೇ.71 ರೇಟಿಂಗ್‌ನೊಂದಿಗೆ 13 ವಿಶ್ವ ನಾಯಕರ ಸಮೀಕ್ಷೆಯಲ್ಲಿ ಅಗ್ರಸ್ಥಾನ.
2023: ವರ್ಷದುದ್ದಕ್ಕೂ ತಮ್ಮ ನಾಯಕತ್ವವನ್ನು ಮುಂದುವರೆಸಿದ ಮೋದಿ. ಏಪ್ರಿಲ್, ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಗಳಲ್ಲಿ ಶೇ.76 ರೇಟಿಂಗ್.
ಫೆಬ್ರವರಿ 2024: ಅವರ ಅನುಮೋದನಾ ರೇಟಿಂಗ್ ಶೇ.78ಕ್ಕೇರಿಕೆ.



















