ನವದೆಹಲಿ: ರೇಣುಕಾಸ್ವಾಮಿ ನಟ ದರ್ಶನ್ ಅಭಿಮಾನಿ ಆಗಿದ್ದ. ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ದರ್ಶನ್ ಜೊತೆಗೆ ವಿವಾಹೇತರ ಸಂಬಂಧ (ಲಿವ್ ಇನ್ ರಿಲೇಶನ್) ಹೊಂದಿದ್ದರು. ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಸಭ್ಯವಾಗಿ ಮೆಸೇಜ್ ಮಾಡಿದ್ದ. ಇದರಿಂದ ಆಕ್ರೋಶಗೊಂಡು ಎ2 ಆರೋಪಿ ದರ್ಶನ್ ತನ್ನ ಸ್ನೇಹಿತರು, ಅಭಿಮಾನಿ ಸಂಘದ ಸದಸ್ಯರನ್ನು ಬಳಸಿಕೊಂಡು ಹತ್ಯೆ ಮಾಡಿದ್ದಾರೆಂದು ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ಪ್ರಬಲ ವಾದ ಮಂಡಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠದಲ್ಲಿ ನಡೆಸಿದೆ. ಈ ವೇಳೆ ಸುಮಾರು 1 ಗಂಟೆ ಪ್ರಬಲ ವಾದ ಮಂಡಿಸಿದ ಸಿದ್ಧಾರ್ಥ್ ಲೂಥ್ರಾ ಅವರು ಹಲವು ವಿಷಯಗಳನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಜಡ್ಜ್ ಪ್ರಶ್ನೆಗಳಿಗೆ ವಕೀಲರ ಉತ್ತರವೇನು ?
ನ್ಯಾ. ಪರ್ದಿವಾಲ : ಕೊಲೆಗೆ ಕಾರಣ ಏನು?
ಲೂಥ್ರಾ: ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ ಅಭಿಮಾನಿ. ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ದರ್ಶನ ಜೊತೆಗೆ ವಿವಾಹಯೇತರ ಸಂಬಂಧ ಹೊಂದಿದ್ದ ಹಿನ್ನೆಲೆ ಅಸಭ್ಯವಾಗಿ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ಇದರಿಂದ ಆಕ್ರೋಶಗೊಂಡು ಎ2 ಆರೋಪಿ ದರ್ಶನ್ ತನ್ನ ಸ್ನೇಹಿತರು, ಅಭಿಮಾನಿ ಸಂಘದ ಸದಸ್ಯರನ್ನು ಬಳಸಿಕೊಂಡು ಹತ್ಯೆ ಮಾಡಿದ್ದಾರೆ.
ನ್ಯಾ. ಪರ್ದಿವಾಲ: ಎಲ್ಲಾ ಆರೋಪಿಗಳಿಗೆ ಜಾಮೀನು ದೊರಕಿದೆಯೇ?
ಲೂಥ್ರಾ: ಹೌದು. ಎಲ್ಲಾ ಆರೋಪಿಗಳಿಗೆ ಜಾಮೀನು ದೊರಕಿದೆ. ಮುಖ್ಯವಾಗಿ ಎ2 ಆರೋಪಿ ದರ್ಶನ್ ಆರೋಗ್ಯ ಕಾರಣ ನೀಡಿ ಜಾಮೀನು ಪಡೆದರೂ ಬಳಿಕ ರೆಗ್ಯೂಲರ್ ಜಾಮೀನು ದೊರಕಿದೆ. ಜಾಮೀನು ಪಡೆದ ನಂತರ ಅವರು ಆಸ್ಪತ್ರೆ ಬದಲು ಸಿನಿಮಾ ಶೂಟಿಂಗ್, ವಿದೇಶ ಪ್ರವಾಸ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ನ್ಯಾ. ಪರ್ದಿವಾಲ: ಚಾರ್ಜ್ಶೀಟ್ ಫ್ರೇಮ್ ಆಗಿದೆಯೇ ? ಪ್ರತ್ಯಕ್ಷದರ್ಶಿಗಳಿದ್ದಾರ ?
ಲೂಥ್ರಾ : ಚಾರ್ಜ್ಶೀಟ್ ಇನ್ನು ಫ್ರೇಮ್ ಆಗಿಲ್ಲ, ಆದರೆ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ. ಆರೋಪಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಎಲ್ಲರ ನಂಬರ್‌ಗಳು ಒಂದೇ ಕಡೆ ಟ್ರೇಸ್ ಆಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಇವರ ಚಲನವಲನಗಳಿವೆ. ಕೆಲವು ಆರೋಪಿಗಳು ಹಲ್ಲೆ ನಡೆಸಿ ಅದನ್ನು ಎ1-ಎ2 ಆರೋಪಿಗಳಿಗೆ ಕಳುಹಿಸಿದ್ದಾರೆ. ಅನೇಕ ದೂರವಾಣಿ ಸಂಭಾಷಣೆಗಳು ನಡೆದಿವೆ.
ನ್ಯಾ. ಪರ್ದಿವಾಲ: ಸಿಸಿಟಿವಿಯಲ್ಲಿ ಆರೋಪಿಗಳ ಗುರುತು ಪತ್ತೆಯಾಗಿದೆಯೇ?
ಲೂಥ್ರಾ: ಸ್ವಷ್ಟವಾಗಿಲ್ಲ. ಬಿಳಿ ಸ್ಕಾರ್ಪಿಯೋ ಮತ್ತು ರ‍್ಯಾಂಗ್ಲಾರ್ ಕಾರ್ ಬಳಸಿಕೊಂಡು ಓಡಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ತಲೆ ಮರೆಸಿಕೊಂಡು ಓಡಾಡಿದ್ದಾರೆ. ಆರಂಭದಲ್ಲಿ ಶರಣಾದ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇದರಲ್ಲಿ ದೊಡ್ಡ ಜಾಲ ಇರುವುದು ಪತ್ತೆಯಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ವೈಜ್ಞಾನಿಕ ಮತ್ತು ಡಿಜಿಟಲ್ ಸಾಕ್ಷ್ಯಗಳಿವೆ.


















