ಕುಂದಾಪುರ : ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಲ್ಲಿ ನರ್ಸ್‌ಗಳ ಮಾಸಿಕ ವೇತನ 2,500 ರೂಪಾಯಿಂದ 3 ಸಾವಿರ ರೂಪಾಯಿ ಹೆಚ್ಚಾಗಿದ್ದು, ಇದನ್ನು ನೀಡಲು ಆರೋಗ್ಯ ಇಲಾಖೆಯಲ್ಲಿ 3 ತಿಂಗಳ ಹೆಚ್ಚುವರಿ ವೇತನ ಲಂಚ ಪಡೆಯಲಾಗುತ್ತಿದೆ’ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಆರೋಪ ಹೊರಿಸಿದ್ದಾರೆ.
ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಡ್ಗಿ, ‘ಸಿಬ್ಬಂದಿಯ ವೇತನದಲ್ಲಿ ಏರಿಕೆಯಾಗಿರುವ ಅಲ್ಪ ಪ್ರಮಾಣಕ್ಕೂ ಲಂಚ ಪಡೆಯುವ ದುಷ್ಟತನ ಯಾಕೆ? ಕೇಳಿರುವುದು ಹಾಗೂ ಪಡೆದಿರುವುದು ಯಾರು ಎನ್ನುವುದಕ್ಕೆ ಸಾಕ್ಷಿ ಇದೆ. ಸದ್ಯ ಹೆಸರು ಬಹಿರಂಗಪಡಿಸುವುದಿಲ್ಲ. ಪಡೆದವರು ತಕ್ಷಣ ಅದನ್ನು ಮರಳಿಸಬೇಕು’ ಎಂದು ಸೂಚನೆ ನೀಡಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ‘ನಮ್ಮ ಜಿಲ್ಲೆ ಇಷ್ಟೊಂದು ಲಂಚಬಾಕತನದಲ್ಲಿ ಹೆಸರು ಕೆಡಿಸಿಕೊಂಡಿರಲಿಲ್ಲ. ಹಣ ಪಡೆದವರು ಮರಳಿಸಬೇಕು’ ಎಂದಿದ್ದಾರೆ.



















