ಬೆಂಗಳೂರು: ವ್ಯಾಪಾರಿಗಳಿಗೆ ಟ್ಯಾಕ್ಸ್ ಬರೆ ಬೀಳುತ್ತಿದ್ದು, ಸಣ್ಣ ವ್ಯಾಪಾರಿಗಳು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಣ್ಣ ವ್ಯಾಪಾರಿಗಳು ಯುಪಿಐಗೆ ಗುಡ್ ಬೈ ಹೇಳುತ್ತಿದ್ದಾರೆ. ಇನ್ನು ಮುಂದೆ ನಮ್ಮ ಅಂಗಡಿಯಲ್ಲಿ ಯುಪಿಐನಿಂದ ಹಣ ಪಾವತಿಸುವಂತಿಲ್ಲ. ಕ್ಯಾಶ್ ಇದ್ದರೆ ಮಾತ್ರ ವ್ಯವಹಾರ ಎಂದು ವ್ಯಾಪಾರಿಗಳು ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ.
ವಾಣಿಜ್ಯ ತೆರಿಗೆಯಿಂದ ಸಣ್ಣ ವ್ಯಾಪಾರಸ್ಥರಿಗೆ ಟ್ಯಾಕ್ಸ್ ನೋಟಿಸ್ ಬರುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸ್ಕ್ಯಾನರ್ ಗಳನ್ನು ಕಿತ್ತೆಸೆಯುತ್ತಿದ್ದಾರೆ. ತಮಗೂ ನೋಟಿಸ್ ಬರಬಹುದು ಎಂಬ ಭೀತಿಯಿಂದ ಯುಪಿಐ ಬ್ಯಾನ್ ಮಾಡುತ್ತಿದ್ದಾರೆ. ರಾಜಾಜಿನಗರ, ಬಸವೇಶ್ವರ ನಗರ, ಲಿಂಗರಾಜಪುರ ಸೇರಿದಂತೆ ಹಲವೆಡೆ ವ್ಯಾಪಾರಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈಗಾಗಲೇ ಹಲವು ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಲಕ್ಷ ಲಕ್ಷ ತೆರಿಗೆ ಕಟ್ಟುವಂತೆ ನೋಟಿಸ್ ಬರುತ್ತಿವೆ.



















