ಚಾಮರಾಜನಗರ : ಸಿದ್ದರಾಮಯ್ಯ ಅವರು ತಮ್ಮ ಮಾತುಗಳನ್ನು ರಾಜಣ್ಣ ಅವರ ಮೂಲಕ ಹೇಳಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಆಗಿದೆಯಂತೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಆಗುವ ಬದಲಾವಣೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಮಾಜಿ ಸಚಿವ ಎನ್ ಮಹೇಶ್ ಹೇಳಿದ್ದಾರೆ.
ಕೊಳ್ಳೆಗಾಲದಲ್ಲಿ ಮಾತನಾಡಿದ ಮಹೇಶ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವಿರುದ್ಧ ಕಾಂಗ್ರೆಸ್ ನಾಯಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಸುರ್ಜೇವಾಲ ಅವರ ವಿರುದ್ಧ ಮಾತನಾಡುತ್ತಿರುವವರೆಲ್ಲಾ ಸಿದ್ದರಾಮಯ್ಯ ಅವರ ಬಣದಲ್ಲೇ ಗುರುತಿಸಿಕೊಂಡಿದ್ದಾರೆ. ಸುರ್ಜೇವಾಲ ಅವರ ಮೇಲೆ ಕಾಂಗ್ರೆಸ್ ಶಾಸಕರಿಗಿರುವ ಅಸಮಧಾನ, ಸಿದ್ದರಾಮಯ್ಯ ಅವರ ಅಸಮಧಾನ ಎಂದು ಅವರು ಹೇಳಿದ್ದಾರೆ.
ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್‌ಗೆ ಬಿಜೆಪಿ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ ಆಗಿದ್ದಾರೆ. ಯತ್ನಾಳ್ ಏನೇ ಮಾತನಾಡಿದರು ಬಿಜೆಪಿಯಲ್ಲಿ ಮಾನ್ಯತೆ ಇಲ್ಲ. ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ ಗಳನ್ನು ಶಮನಗೊಳಿಸುವ ಪ್ರಯತ್ನ ಹೈಕಮಾಂಡ್‌ನಿಂದ ನಡೆಯುತ್ತಿದೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದಾರೆ.
55 ಕಾಂಗ್ರೆಸ್ ಶಾಸಕರ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಯಿಸಿದ ಅವರು,ಅದು ಕಾಂಗ್ರೆಸ್ ವಲಯದಲ್ಲೇ ನಡೆಯುತ್ತಿದೆ. ಒಂದು ರೂಪಾಯಿ ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಶಾಸಕರು ಸಿದ್ದರಾಮಯ್ಯ ಅವರ ವಿರುದ್ಧ ಬಂಡಾಯ ಏಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.



















