ನವದೆಹಲಿ/ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಬೆಂಗಳೂರಿನಾದ್ಯಂತ 60ಕ್ಕೂ ಹೆಚ್ಚು ಶಾಲೆಗಳಿಗೆ ಇಂದು ಬೆಳ್ಳಂಬೆಳಗ್ಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದು, ಭಾರಿ ಆತಂಕ ಸೃಷ್ಟಿಸಿವೆ. ದೆಹಲಿಯಲ್ಲಿ ಸುಮಾರು 20 ಶಾಲೆಗಳಿಗೆ ಇಂತಹ “ಸುಳ್ಳು” ಇ-ಮೇಲ್‌ಗಳು ಬಂದಿದ್ದರೆ, ಬೆಂಗಳೂರಿನಲ್ಲಿ 40 ಶಾಲೆಗಳಿಗೆ ಇದೇ ರೀತಿಯ ಸಂದೇಶಗಳು ಬಂದಿವೆ.
ಮಾಹಿತಿ ಲಭಿಸಿದ ತಕ್ಷಣ, ದೆಹಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳಗಳು ಆ ಶಾಲೆಗಳಿಗೆ ಧಾವಿಸಿವೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ತ್ವರಿತವಾಗಿ ಸ್ಥಳಾಂತರಿಸಿ, ಶಾಲಾ ಆವರಣಗಳನ್ನು ಸಂಪೂರ್ಣ ಪರಿಶೀಲನೆ ನಡೆಸಿವೆ. ಯಾವುದೇ ಸ್ಥಳದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇವು ಬರೀ ಸುಳ್ಳು ಬೆದರಿಕೆಗಳು ಎಂದು ಖಚಿತಪಡಿಸಲಾಗಿದೆ.
ಇ-ಮೇಲ್‌ನಲ್ಲಿನ ಬೆದರಿಕೆ ಸಂದೇಶ
ದೆಹಲಿ ಪೊಲೀಸರ ಪ್ರಕಾರ, ಬೆದರಿಕೆ ಇ-ಮೇಲ್‌ನಲ್ಲಿ “ಶಾಲೆಗಳ ತರಗತಿಗಳಲ್ಲಿ, ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ಹಲವಾರು ಸ್ಫೋಟಕ ಸಾಧನಗಳನ್ನು ಕೌಶಲ್ಯಪೂರ್ಣವಾಗಿ ಇರಿಸಲಾಗಿದೆ” ಎಂದು ಹೇಳಲಾಗಿದೆ. ಅಲ್ಲದೇ, “ಪ್ರತಿಯೊಬ್ಬರನ್ನು ಈ ಜಗತ್ತಿನಿಂದ ನಾಶ ಮಾಡುವುದಾಗಿಯೂ” ಬೆದರಿಕೆ ಹಾಕಲಾಗಿದೆ.
“ನಾನು ನಿಮ್ಮೆಲ್ಲರನ್ನೂ ಈ ಜಗತ್ತಿನಿಂದ ಅಳಿಸಿ ಹಾಕುತ್ತೇನೆ. ಒಬ್ಬನೇ ಒಬ್ಬನೂ ಜೀವಂತವಾಗಿ ಉಳಿಯಬಾರದು. ಪೋಷಕರು ಶಾಲೆಗೆ ಬಂದು ತಮ್ಮ ಮಕ್ಕಳ ನಿಶ್ಚಲ, ವಿಚ್ಛಿದ್ರಗೊಂಡ ದೇಹಗಳನ್ನು ನೋಡುವ ಸುದ್ದಿಯನ್ನು ನೋಡಿ ನಾನು ಸಂತೋಷದಿಂದ ನಗುತ್ತೇನೆ” ಎಂದು ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. “ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ. ಸ್ಫೋಟದ ಸುದ್ದಿ ಸಿಕ್ಕ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಗಂಟಲನ್ನು ಮತ್ತು ನನ್ನ ಮಣಿಕಟ್ಟನ್ನು ಕತ್ತರಿಸಿಕೊಳ್ಳುತ್ತೇನೆ” ಎಂದೂ ಬರೆದಿದ್ದಾರೆ.
“ನನಗೆ ಯಾರೂ ಎಂದೂ ಸಹಾಯ ಮಾಡಲಿಲ್ಲ. ಮನೋವೈದ್ಯರಾಗಲೀ, ಮನಶ್ಶಾಸ್ತ್ರಜ್ಞರಾಗಲೀ ಯಾರೂ ಎಂದಿಗೂ ನನ್ನ ಬಗ್ಗೆ ಕಾಳಜಿ ಮಾಡಿಲ್ಲ, ಮಾಡುವುದೂ ಇಲ್ಲ. ಅವರು ಅಸಹಾಯಕರು ಮತ್ತು ಅಜ್ಞಾನಿಗಳನ್ನು ಔಷಧದ ಕೂಪಕ್ಕೆ ನೂಕುವಲ್ಲಿ ಮಾತ್ರ ಗಮನ ಹರಿಸುತ್ತಾರೆ. ಆ ಔಷಧಿಗಳು ನಿಮ್ಮ ಅಂಗಾಂಗಳನ್ನು ಒಂದದಾಗಿ ನಾಶ ಮಾಡುತ್ತವೆ. ವಿಪರೀತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ಮನೋವೈದ್ಯರು ಎಂದಿಗೂ ಹೇಳುವುದಿಲ್ಲ. ಮಾನಸಿಕ ಔಷಧಿಗಳು ನಿಮ್ಮನ್ನು ಗುಣಪಡಿಸುತ್ತವೆ ಎಂದು ನಿಮ್ಮ ಬ್ರೈನ್ ವಾಷಿ ಮಾಡಲಾಗುತ್ತದೆಯೇ ಹೊರತು, ವಾಸ್ತವದಲ್ಲಿ ಅವು ನಿಮಗೆ ನೆರವಾಗುವುದಿಲ್ಲ ಎಂಬುದಕ್ಕೆ ನಾನೇ ಜೀವಂತ ಸಾಕ್ಷಿ. ನೀವೆಲ್ಲರೂ ಇದಕ್ಕೆ(ಸಾವಿಗೆ) ಅರ್ಹರು. ನನ್ನಂತೆ ನೀವೂ ನೋವುಣ್ಣಬೇಕು” ಎಂದು ಬೆದರಿಕೆ ಇಮೇಲ್ ನಲ್ಲಿ ಬರೆಯಲಾಗಿದೆ.
ಬೆಂಗಳೂರಿನಲ್ಲಿಯೂ ಆತಂಕ
ಬೆಂಗಳೂರಿನ ಆರ್.ಆರ್. ನಗರ, ಕೆಂಗೇರಿ ಸೇರಿದಂತೆ ಕನಿಷ್ಠ 40 ಖಾಸಗಿ ಶಾಲೆಗಳಿಗೆ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿವೆ. ಹೆಚ್ಚಿನ ಶಾಲೆಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥರಾಗಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತಿವೆ.
ದೆಹಲಿ ಶಾಲೆಗಳಿಗೆ ವಾರದಲ್ಲಿ ನಾಲ್ಕನೇ ಬೆದರಿಕೆ
ದೆಹಲಿ ಶಾಲೆಗಳಿಗೆ ಒಂದು ವಾರದಲ್ಲಿ ನಾಲ್ಕನೇ ಬಾರಿ ಇಂತಹ ‘ಸುಳ್ಳು’ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿವೆ. ಈ ವಾರ ಸುಮಾರು 10 ಶಾಲೆಗಳು ಮತ್ತು ಒಂದು ಕಾಲೇಜಿಗೆ ಇಂತಹ ಇ-ಮೇಲ್‌ಗಳು ಬಂದಿದ್ದವು.
ಸೋಮವಾರ, ರಾಜಧಾನಿಯ ಕನಿಷ್ಠ ಮೂರು ಶಾಲೆಗಳಿಗೆ ಬಾಂಬ್‌ಗಳನ್ನು ಶಾಲಾ ಆವರಣದಲ್ಲಿ ಇರಿಸಲಾಗಿದೆ ಎಂದು ಹೇಳುವ ಇ-ಮೇಲ್ ಬಂದಿತ್ತು. ಪ್ರಶಾಂತ್ ವಿಹಾರ್ ಮತ್ತು ದ್ವಾರಕಾ ಸೆಕ್ಟರ್ 16 ರ ಸಿಆರ್‌ಪಿಎಫ್ ಶಾಲೆಗಳು, ಹಾಗೆಯೇ ಚಾಣಕ್ಯಪುರಿಯ ಮತ್ತೊಂದು ಶಾಲೆಯಿಂದ ಕರೆಗಳು ಬಂದ ನಂತರ, ದೆಹಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಎಲ್ಲ ಪ್ರದೇಶಗಳನ್ನೂ ಪರಿಶೀಲಿಸಿದ್ದಾರೆ.
ಮಂಗಳವಾರ, ಸೇಂಟ್ ಸ್ಟೀಫನ್ ಕಾಲೇಜಿಗೆ ಇದೇ ರೀತಿಯ ಇ-ಮೇಲ್ ಬಂದಿತ್ತು. ಬುಧವಾರ, ದೆಹಲಿಯಾದ್ಯಂತ ದ್ವಾರಕಾ, ವಸಂತ್ ಕುಂಜ್, ಹೌಜ್ ಖಾಸ್, ಪಶ್ಚಿಮ ವಿಹಾರ್ ಮತ್ತು ಲೋಧಿ ಎಸ್ಟೇಟ್‌ನಲ್ಲಿರುವ ಐದು ಶಾಲೆಗಳಿಗೆ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು. ಕೊಠಡಿಗಳ ಸುತ್ತ ಇರಿಸಲಾದ ಬ್ಯಾಗ್‌ಗಳ ಒಳಗೆ ಸ್ಫೋಟಕ ಸಾಧನಗಳನ್ನು ಇರಿಸಲಾಗಿದೆ ಎಂದು ಸಂದೇಶದಲ್ಲಿ ಹೇಳಲಾಗಿತ್ತು.
12 ವರ್ಷದ ವಿದ್ಯಾರ್ಥಿಯ ಬಂಧನ
ಜುಲೈ 15ರ ಮಂಗಳವಾರ ದ್ವಾರಕಾದ ಸೇಂಟ್ ಥಾಮಸ್ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದಕ್ಕಾಗಿ 12 ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಶಾಲೆಗೆ ಮತ್ತೊಂದು ಬಾಂಬ್ ಬೆದರಿಕೆ ಬಂದಿದೆ ಎಂದು ಅವರು ಹೇಳಿದ್ದಾರೆ.


















