ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅನೇಕ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಬಿ.ಎನ್.ಎಸ್. ಸೆಕ್ಷನ್ 211ರಡಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆಯ ಹಂತದಲ್ಲಿವೆ. ಈ ನಡುವೆ ಊಹಾಪೋಹ ಸೃಷ್ಟಿಸಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ. ಒಂದು ವೇಳೆ ಯಾವುದೇ ಸುದ್ದಿ ಪ್ರಚಾರ ಪಡಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಈ ಸಂಬಂಧ ಅನೇಕ ವರದಿಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರೊಂದಿಗೆ ಅಥವಾ ಸುದ್ದಿ ಮಾಧ್ಯಮಕ್ಕೆ ಹಂಚಿಕೊಳ್ಳುವಂತಹ ಖಚಿತ ಮಾಹಿತಿಗಳಿದ್ದಲ್ಲಿ, ಅದನ್ನು ಅಧಿಕೃತವಾಗಿ ಇಲಾಖೆ ತಿಳಿಸಲಿದೆ ಎಂದು ತಿಳಿಸಿದ್ದಾರೆ.
ಧಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ವ್ಯಕ್ತಿಯೊಬ್ಬರು ದಕ್ಚಿಣ ಕನ್ನಡ ಜಿಲ್ಲಾ ಎಸ್ಪಿಗೆ ಇತ್ತೀಚೆಗೆ ದೂರು ಸಲ್ಲಿಸಿದ್ದರು. ಈ ಹಿಂದೆಯೇ ಹಲವು ಅಪರಾಧ ಕೃತ್ಯಗಳು ನಡೆದಿವೆ. ಜೀವ ಬೆದರಿಕೆಯಿಂದ ತಾನೂ ಮೃತದೇಹಗಳ ವಿಲೇವಾರಿ ಮಾಡಿದ್ದೆ. ಆದರೇ ಈಗ ಪಾಪಪ್ರಜ್ಞೆ ಕಾಡುತ್ತಿದೆ. ಕಾನೂನು ರಕ್ಷಣೆ ನೀಡಿದ್ದಲ್ಲಿ ವಿಲೇವಾರಿ ಮಾಡಿದ ಮೃತದೇಹಗಳನ್ನು ತೋರಿಸುವುದಾಗಿ ವ್ಯಕ್ತಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



















