ನವದೆಹಲಿ: 200 ಕೋಟಿ ರೂಪಾಯಿ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಭಾರೀ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಎರಡನೇ ಪೂರಕ ಚಾರ್ಜ್‌ಶೀಟ್ ಅನ್ನು ರದ್ದುಗೊಳಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಕುಖ್ಯಾತ ವಂಚಕ ಸುಕೇಶ್ ಚಂದ್ರಶೇಖರ್ ಪ್ರಮುಖ ಆರೋಪಿಯಾಗಿದ್ದಾನೆ.
ನ್ಯಾಯಮೂರ್ತಿ ಅನೀಶ್ ದಯಾಳ್ ನೇತೃತ್ವದ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಈ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ತರಲು ನಿರಾಕರಿಸಿದೆ. ಜಾಕ್ವೆಲಿನ್‌ರ ವಕೀಲರು, ತಮ್ಮ ಕಕ್ಷಿದಾರರಿಗೆ ಸುಕೇಶ್‌ನಿಂದ ಸಿಕ್ಕ ಉಡುಗೊರೆಗಳ ಮೂಲದಲ್ಲಿ ಅಕ್ರಮ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ವಾದಿಸಿದ್ದರು.
ಆದರೆ, ಇಡಿ ಪರ ವಕೀಲರು ಈ ಅರ್ಜಿಯನ್ನು ಬಲವಾಗಿ ವಿರೋಧಿಸಿ, ವಿಶೇಷ ನ್ಯಾಯಾಲಯವು ಈಗಾಗಲೇ ಚಾರ್ಜ್‌ಶೀಟ್‌ಗೆ ಸಂಬಂಧಿಸಿದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಣ ವಿಚಾರಣೆಗೆ ತಡೆಯಾಜ್ಞೆ ತರಬಾರದು ಎಂದು ವಾದಿಸಿದ್ದಾರೆ. ಅಲ್ಲದೇ ಜಾಕ್ವೆಲಿನ್‌ರ ವಕೀಲರು ಈ ಆದೇಶದ ಕುರಿತಂತೆ ಹಿಂದೆ ಎಂದೂ ಸವಾಲು ಮಾಡಿಲ್ಲ ಎಂಬುದು ಇಡಿಯ ವಾದವಾಗಿತ್ತು. ಇ.ಡಿ. ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಜಾಕ್ವೆಲಿನ್ ಅರ್ಜಿಯನ್ನು ವಜಾ ಮಾಡಿದೆ.
ಈ ತೀರ್ಪಿನಿಂದಾಗಿ ಜಾಕ್ವೆಲಿನ್‌ಗೆ ಕಾನೂನು ಸಮರ ಮತ್ತಷ್ಟು ತೀವ್ರವಾಗಿದ್ದು, ಅವರ ವಿರುದ್ಧದ ಆರೋಪಗಳು ಮತ್ತಷ್ಟು ಬಲಗೊಂಡಿವೆ. ಸುಕೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಪಾಲೋಸ್ ಸೇರಿದಂತೆ ಇತರ ಆರೋಪಿಗಳ ವಿರುದ್ಧವೂ ದೆಹಲಿ ಪೊಲೀಸರು ಮತ್ತು ಇಡಿ ತನಿಖೆ ನಡೆಸುತ್ತಿವೆ. ನ್ಯಾಯಮೂರ್ತಿ ಅನೀಶ್ ದಯಾಳ್ ನೇತೃತ್ವದ ನ್ಯಾಯಪೀಠದ ಈ ತೀರ್ಪಿನ ಕುರಿತು ಹೆಚ್ಚಿನ ವಿವರಗಳು ಆದೇಶದ ಪ್ರತಿ ಲಭಿಸಿದ ಬಳಿಕವಷ್ಟೇ ಲಭ್ಯವಾಗಲಿದೆ.



















