ಪಣಜಿ: ಈದ್ ಹಬ್ಬದ ಆಚರಣೆಗೆಂದು 3 ಹೆಣ್ಣುಮಕ್ಕಳನ್ನು ಹೋಟೆಲಿಗೆ ಕರೆಸಿಕೊಂಡು, ಅವರ ಮೇಲೆ ಇಬ್ಬರು ಯುವಕರು ಅತ್ಯಾಚಾರಗೈದ ಘಟನೆ ಗೋವಾದಲ್ಲಿ ನಡೆದಿದೆ. ಘಟನೆ ಸಂಬಂಧ ಅಲ್ತಾಫ್ ಮುಜಾವರ್(19) ಮತ್ತು ಓಂ ನಾಯಕ್(21) ಎಂಬವರನ್ನು ಬಂಧಿಸಲಾಗಿದ್ದು, ಅವರಿಗೆ ರೂಂ ಕೊಟ್ಟ ಅತಿಥಿ ಗೃಹದ ಮಾಲೀಕ ರಜತ್ ಚೌಹಾಣ್(31) ಮತ್ತು ಮ್ಯಾನೇಜರ್ ಮನ್ಸೂರ್ ಪೀರ್(35) ಎಂಬವರನ್ನೂ ಬಂಧಿಸಲಾಗಿದೆ.
ಅತ್ಯಾಚಾರಕ್ಕೊಳಗಾದವರನ್ನು ಒಂದೇ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ 11, 13 ಮತ್ತು 15 ವರ್ಷ ವಯಸ್ಸಿನ ಅಪ್ರಾಪ್ತ ಹೆಣ್ಣುಮಕ್ಕಳು ಎಂದು ಗುರುತಿಸಲಾಗಿದೆ. ಕೆಲವು ತಿಂಗಳ ಹಿಂದೆ ಆರೋಪಿ ಮುಜಾವರ್ ಸಾಮಾಜಿಕ ಜಾಲತಾಣದಲ್ಲಿ 15 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಹಲವು ತಿಂಗಳಿಂದ ಇಬ್ಬರೂ ಚಾಟ್ ಮಾಡುತ್ತಿದ್ದರು. ಕಳೆದ ಶನಿವಾರ ಈದ್ ಹಬ್ಬವಿದ್ದ ಕಾರಣ ಹಬ್ಬ ಆಚರಿಸೋಣ ಎಂದು ಹೇಳಿ ಆರೋಪಿಯು ಆ ಬಾಲಕಿಯನ್ನು ಆಹ್ವಾನಿಸಿದ್ದ.
ಅದರಂತೆ, ಆಕೆ ತನ್ನ 13 ವರ್ಷದ ಕಿರಿಯ ಸಹೋದರಿ ಮತ್ತು 11 ವರ್ಷದ ಗೆಳತಿಯನ್ನು ಕರೆದುಕೊಂಡು ಹೋಗಿದ್ದಳು. ಉತ್ತರ ಗೋವಾದ ಕಲಾಂಗುಟೆ ಹೋಟೆಲ್ ನಲ್ಲಿ ಎರಡು ರೂಂ ಬುಕ್ ಮಾಡಿಕೊಂಡು, ಆರೋಪಿಗಳೊಂದಿಗೆ ಈ ಬಾಲಕಿಯರೂ ಕೊಠಡಿ ಪ್ರವೇಶಿಸಿದ್ದರು. ಅಂದು ರಾತ್ರಿ 15 ವರ್ಷದ ಬಾಲಕಿಯ ಜನ್ಮದಿನವಿದ್ದ ಕಾರಣ, ಹೋಟೆಲ್ ಕೊಠಡಿಯಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದರು. ಇದಾದ ಬಳಿಕ ಆರೋಪಿ ಮುಜಾವರ್ 15 ವರ್ಷದ ತನ್ನ ಗರ್ಲ್ ಫ್ರೆಂಡ್ ಮೇಲೆ ಅತ್ಯಾಚಾರವೆಸಗಿದ್ದಾನೆ. ಇನ್ನೊಂದು ಕೊಠಡಿಯಲ್ಲಿ ಮತ್ತಿಬ್ಬರು ಬಾಲಕಿಯರ ಮೇಲೆ ಮುಜಾವರ್ ಸ್ನೇಹಿತ ಓಂ ನಾಯಕ್ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದೆ.
ಮಾರನೇ ದಿನ 15 ವರ್ಷದ ಬಾಲಕಿಯ ಕುಟುಂಬಸ್ಥರು, ಶನಿವಾರ ಮನೆಯಿಂದ ಹೊರಟಿದ್ದ ತಮ್ಮ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಅದೇ ರೀತಿ, 11 ವರ್ಷದ ಬಾಲಕಿಯ ತಂದೆಯೂ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರು, ಹೋಟೆಲ್ ನಿಂದ ಮೂವರು ಹೆಣ್ಣುಮಕ್ಕಳನ್ನು ರಕ್ಷಿಸಿದ್ದು, ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಜೊತೆಗೆ, ಅಪ್ರಾಪ್ತ ವಯಸ್ಸಿನವರಿಗೆ ಗುರುತು ಪತ್ರ ದೃಢೀಕರಿಸಿದೇ ಕೊಠಡಿ ಬಾಡಿಗೆ ಕೊಟ್ಟ ಆರೋಪದ ಮೇರೆಗೆ ಹೋಟೆಲ್ ಮಾಲೀಕ ಮತ್ತು ಮ್ಯಾನೇಜರ್ ನನ್ನೂ ಬಂಧಿಸಲಾಗಿದೆ ಎಂದು ಉತ್ತರ ಗೋವಾ ಎಸ್ಪಿ ರಾಹುಲ್ ಗುಪ್ತಾ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೊಲೀಸರು ಎರಡು ಪ್ರತ್ಯೇಕ ಎಫ್ ಐಆರ್ ದಾಖಲಿಸಿದ್ದಾರೆ.