ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಹಲವೆಡೆ ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಂದು ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ಧಾರವಾಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ, ನಿನ್ನೆ ಸಂಜೆಯಿಂದ ಬೆಂಬಿಡದೆ ಮಳೆ ಸುರಿಯುತ್ತಿದೆ. ಅಲ್ಲದೇ, ಧಾರವಾಡ, ಹಾವೇರಿ, ಬೆಳಗಾವಿ, ಗದಗ, ಬೀದರ್ ಸೇರಿದಂತೆ ಉತ್ತರ ಒಳನಾಡಿನ ಬಹುತೇಕ ಕಡೆ ಮಳೆ ಸುರಿಯುತ್ತಿದೆ. ಹೀಗಾಗಿ ಅಲ್ಲಲ್ಲಿ ಜನ -ಜೀವನ ಅಸ್ತವ್ಯಸ್ಥವಾಗಿದೆ.
ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು ನವಲಗುಂದ, ನರಗುಂದ ಭಾಗದ ರೈತರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ಜೂ.12 ರಂದು ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ನಿನ್ನೆ ರಾತ್ರಿ ವ್ಯಾಪಕ ಮಳೆಯಾಗಿದ್ದರಿಂದ, ಎರಡು ಹಳ್ಳದ ಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರವಾಹ ಪರಿಸ್ಥತಿ ಉಂಟಾಗಬಹುದು.
ರಾಜ್ಯ ಹವಾಮಾನ ಇಲಾಖೆ ಇವರ ವರದಿಯಂತೆ ಮುಂದಿನ 3 ದಿನ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಹಾಗೂ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಇಂದು ಪಿಯುಸಿ ವಾರ್ಷಿಕ ಪರೀಕ್ಷೆ-3 ಜರುಗುತ್ತಿದ್ದು, ನಿಗದಿಯಾಗಿರುವ ವೇಳಾಪಟ್ಟಿಯಂತೆ ಅದು ನಡೆಯಲಿದೆ. ಈ ಪರೀಕ್ಷೆಯು ಹುಬ್ಬಳ್ಳಿಯ ಮೂರು, ಧಾರವಾಡದ ಮೂರು ಹಾಗೂ ಕುಂದಗೋಳ, ಕಲಘಟಗಿ ಮತ್ತು ಅಣ್ಣಿಗೇರಿ ಪಟ್ಟಣದ ತಲಾ ಒಂದು ಕೇಂದ್ರ ಸೇರಿ ಒಟ್ಟು ಒಂಬತ್ತು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಯಥಾ ಪ್ರಕಾರ ಪರೀಕ್ಷೆ ನಡೆಯಲಿದ್ದು, ಸಂಭಂದಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಎಲ್ಲ ಇಲಾಖೆ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದು, ಮಳೆ, ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಈ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.