ದಿಢೀರ್ ಬೆಳವಣಿಗೆಯಲ್ಲಿ ಸಿಎಂ ಸಿದ್ದರಾಮಯ್ಯ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ನಿವಾಸಕ್ಕೆ ದೌಡಾಯಿದ್ರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಹರಿಪ್ರಸಾದ್ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ಕೆಲ ಕಾಲ ಚರ್ಚಿಸಿದ್ದಾರೆ. ಇತ್ತೀಚೆಗೆ ಕರಾವಳಿಯಲ್ಲಿ ನಡೆದಿರುವ ರಕ್ತಪಾತಕ್ಕೆ ಕಡಿವಾಣ ಹಾಕುವುದು ಹೇಗೆ ಅನ್ನೋದರ ಬಗ್ಗೆ ಉಭಯ ನಾಯಕರು ಸಮಾಲೋಚಿಸಿದ್ದಾರೆ.

ಇದರ ಮೊದಲ ಹೆಜ್ಜೆ ಎನ್ನುವಂತೆ ಮಂಗಳೂರು ಎಸ್ಪಿ ಹಾಗೂ ಪೊಲೀಸ್ ಕಮೀಷನರ್ ಇಬ್ಬರನ್ನೂ ವರ್ಗಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡದಲ್ಲಿ ನಡೆದಿರುವ ಸರಣಿ ಕೊಲೆಗಳು, ಹಿಂಸೆಯ ಘಟನಾವಳಿಗಳು, ಪ್ರಚೋದನಕಾರಿ ಭಾಷಣಗಳು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರಗಳನ್ನು ಇಬ್ಬರೂ ಸಮಾಲೋಚಿಸಿದ್ದಾರೆ. ಕರಾವಳಿಯಲ್ಲಿ ಶಾಂತಿ ನೆಲೆಗೊಳಿಸಲು ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡುವ ನಿಟ್ಟಿನಲ್ಲಿ ಹರಿಪ್ರಸಾದ್ ರಿಂದ ಕೆಲ ಸಲಹೆಗಳನ್ನು ಸಿಎಂ ಪಡೆದಿದ್ದಾರೆ. ಅಷ್ಟೇ ಅಲ್ಲಾ ಶೀಘ್ರವೇ ಸಂಪುಟ ಪುನಾರಚನೆ ತಯಾರಿ ನಡೆದಿದ್ದು, ಹರಿಪ್ರಸಾದ್ ಅವರಿಗೆ ಮಂತ್ರಿಗಿರಿ ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈ ಬಗ್ಗೆಯೂ ಭೇಟಿ ವೇಳೆ ಕೆಲ ಅಂಶಗಳನ್ನು ಚರ್ಚಿಸಲಾಗಿದೆ. ಸಿಎಂಗೆ, ಸಚಿವರಾದ ಜಮೀರ್ ಅಹ್ಮದ್ ಸೇರಿದಂತೆ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸಾಥ್ ನೀಡಿದ್ರು.



















