ಭಾರತ ವಿರುದ್ಧ ಹೀನಾಮಾನವಾಗಿ ಶರಣಾಗಿರುವ ಪಾಕಿಸ್ತಾನ ಇದೀಗ ತನ್ನ ಸೇನಾ ಮುಖ್ಯಸ್ಥರನ್ನು ಅತ್ಯುನ್ನತ ಗೌರವ ನೀಡಿ ಸತ್ಕರಿಸಿದೆ.
ಆಪರೇಷನ್ ಸಿಂಧೂರದ ಆರ್ಭಟಕ್ಕೆ ಪತರಗುಟ್ಟಿದ್ದ ಪಾಕ್ ತನ್ನ ಸೇನಾ ಮುಖ್ಯಸ್ಥರನ್ನೀಗ ಫೀಲ್ಡ್ ಮಾರ್ಷಲ್ ಹುದ್ದೆಗೆ ಪದೋನ್ನತಿ ನೀಡಿ ಗೌರವಿಸಿದೆ. ಭಾರತದ ವಿರುದ್ಧದ ಯುದ್ಧವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಸಿದ ಶ್ರೇಯಕ್ಕಾಗಿ ಪಾಕ್ ನ ಸೇನಾ ಮುಖ್ಯಸ್ಥ ಅಸೀಂ ಮುನೀರ್ ರನ್ನು ದೇಶದ ಅತ್ಯಂತ ಸರ್ವೋಚ್ಚ ಹುದ್ದೆಯಾದ ಫೀಲ್ಡ್ ಮಾರ್ಷಲ್ ಸ್ಥಾನಕ್ಕೆ ಬಡ್ತಿ ನೀಡಿದೆ.
ಈ ಬಗ್ಗೆ ಪ್ರಧಾನಿ ಶಹಬಾಜ್ ಷರೀಫ್ ನಿನ್ನೆ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಹಾಗೆ ನೋಡಿದ್ರೆ ಪಾಕ್ ಇತಿಹಾಸದಲ್ಲಿ ಇದು ಎರಡನೇ ಬಾರಿ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಸೃಷ್ಟಿಸಲಾಗುತ್ತಿದೆ. 1958ರ ಅಕ್ಟೋಬರ್ 7ರಂದು ಜನರಲ್ ಅಯೂಬ್ ಖಾನ್ ಫೀಲ್ಡ್ ಮಾರ್ಷಲ್ ಹುದ್ದೆಗೇರಿದ್ದರು. ಆದರೆ, ಅವತ್ತು ಜನರಲ್ ಅಯೂಬ್ ಖಾನ್ ತಮ್ಮನ್ನು ತಾವೇ ಫೀಲ್ಡ್ ಮಾರ್ಷಲ್ ಹುದ್ದೆಗೆ ನಿಯೋಜಿಸಿಕೊಂಡಿದ್ದರು. ಆದರೆ ಈ ಬಾರಿ ಜನರಲ್ ಅಸೀಂ ಮುನೀರ್ ರನ್ನು ಪ್ರಧಾನಿ ಷರೀಫ್ ನೇಮಕ ಮಾಡಿದ್ದು ವಿಶೇಷವಾಗಿದೆ.



















